ಸೆಷ್ಟಂಬರ್ 20: ಮಹಾಸಂಗಮ – ಅನಂತ ಸಂಕಲ್ಪ.
ಅತೀ ಹೆಚ್ಚು ದೇಣಿಗೆ ನೀಡಿ ದಾಖಲೆ ನಿರ್ಮಿಸಬೇಕು : ಪ್ರಮೋದ್ ರೈ ಪಳಜೆ.
ಪೆರ್ಡೂರು : ಇತಿಹಾಸ ಪ್ರಸಿದ್ಧ ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಪುಣ್ಯದ ಕಾರ್ಯದಲ್ಲಿ ಭಾಗಿಯಾಗಬೇಕಾದರೇ ನಮಗೆ ಭಾಗ್ಯ ಬೇಕು. ಅಂತಹ ಮಹಾಸದಾವಕಾಶ ನಮ್ಮ ಪಾಲಿಗೆ ಬಂದಿದೆ. ಗ್ರಾಮದ ಜನತೆ ನಾವು ಪುಣ್ಯವಂತರು, ಜೀರ್ಣೋದ್ಧಾರದ ಪುಣ್ಯದ ಕಾರ್ಯದಲ್ಲಿ ಪ್ರತಿ ಮನೆಯವರೂ ಭಾಗಿಯಾಗಿ ಸೇವೆ ಸಲ್ಲಿಸಬೇಕು ಎಂಬುದು ನಮ್ಮ ಆಶಯ. ಅದಕ್ಕಾಗಿ ಎಲ್ಲರೂ ಸೇರಿ ಸೆಷ್ಟಂಬರ್ ೨೦ ರಂದು ಮಹಾಸಂಗಮ – ಅನಂತ ಸಂಕಲ್ಪ ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದು ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ. ಶಾಂತಾರಾಮ ಸೂಡ ಹೇಳಿದರು.ಅವರು ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಪೂರ್ವಭಾವಿಯಾಗಿ ಪಾಡಿಗಾರ ವಾಂಟ್ಯಾಳ ಭಜನ ಮಂದಿರದಲ್ಲಿ ನಡೆದ ವಾರ್ಡ್ ಸಭೆಯಲ್ಲಿ ಮಾತನಾಡಿದರು.
ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ ಕುಮಾಲ್ ಪಕ್ಕಾಲು ಜೀರ್ಣೋದ್ಧಾರದ ಸಮಗ್ರ ಮಾಹಿತಿ ನೀಡಿ ಪೆರ್ಡೂರು ದೇವಸ್ಥಾನಕ್ಕೆ 1568 ವರ್ಷಗಳ ಪುರಾತನ ಇತಿಹಾಸ ಮತ್ತು 180 ವರ್ಷಗಳ ಹಿಂದೆಯೇ ಧಾರ್ಮಿಕ ಧತ್ತಿ ಇಲಾಖೆಗೆ ಸೇರಿದ ದೇವಸ್ಥಾನ ಎಂಬ ಖ್ಯಾತಿಯೂ ಇದೆ. ಕ್ಷೇತ್ರಕ್ಕೆ 3 ಲಕ್ಷಕ್ಕೂ ಹೆಚ್ಚು ಭಕ್ತರು ಬರುತ್ತಾರೆ. ನಾವು ಸರಾಸರಿ 1 ಲಕ್ಷ ಭಕ್ತರಿಂದ ದೇವಸ್ಥಾನಕ್ಕೆ ದೇಣಿಗೆಯನ್ನು ಪಡೆದರೂ 2028ರೊಳಗೆ ಸುಸೂತ್ರವಾಗಿ ಜೀರ್ಣೋದ್ಧಾರ ಕಾರ್ಯ ಸಂಪನ್ನಗೊಳ್ಳಲಿದೆ ಎಂದರು.
ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಮೋದ್ ರೈ ಪಳಜೆ ಮಾತನಾಡಿ ನಮ್ಮ ವಾರ್ಡಿನಿಂದ ಅತೀ ಹೆಚ್ಚು ದೇಣಿಗೆ ನೀಡಿ ದಾಖಲೆ ನಿರ್ಮಿಸಬೇಕು ಎಂದು ಗ್ರಾಮದ ಭಕ್ತರಲ್ಲಿ ಮನವಿ ಮಾಡಿದರು.
ವಡ್ಡಮೇಶ್ವರ, ಪಳಜೆ, ಮುಳ್ಳುಗುಡ್ಡೆ ಪ್ರದೇಶಕ್ಕೆ ಉಮೇಶ ಪೂಜಾರಿ ಸುಣ್ಣಂಗಿ ಅಧ್ಯಕ್ಷತೆಯಲ್ಲಿ ವಾರ್ಡ್ ಸಮಿತಿಯನ್ನು ರಚಿಸಲಾಯಿತು. ಗಣೇಶ್ ಪಾಡಿಗಾರ್ ಕಾರ್ಯದರ್ಶಿಯಾಗಿ, ಪ್ರವೀಣ್ ಶೆಟ್ಟಿ ವಡ್ಡಮೇಶ್ವರ ಕೊಶಾಧಿಕಾರಿಯಾಗಿ ಮತ್ತು ಹಲವರನ್ನು ಪದಾಧಿಕಾರಿಗಳು, ಗೌರವ ಸಲಹೆಗಾರರನ್ನಾಗಿ ನೇಮಿಸಲಾಯಿತು.
ವಾಟ್ಯಾಂಳ, ಬಾಡಲ್ ಜಡ್ಡು, ಸರಪಳ್ಳಿ ಪ್ರದೇಶಕ್ಕೆ ಪ್ರವೀಣ್ ಶೆಟ್ಟಿ ನಡುಬೆಟ್ಟು ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಯಿತು. ಮಹೇಶ ಶೆಟ್ಟಿ ಕಾರ್ಯದರ್ಶಿಯಾಗಿ, ಸುಕುಮಾರ್ ಪೂಜಾರಿ ಕೊಶಾಧಿಕಾರಿಯಾಗಿ ಹಾಗೂ ಹಲವರನ್ನು ಪದಾಧಿಕಾರಿಗಳು, ಗೌರವ ಸಲಹೆಗಾರರನ್ನಾಗಿ ನೇಮಿಸಲಾಯಿತು. ರಾಜೇಶ್ ಭಟ್ ವಡ್ಡಮೇಶ್ವರ, ಸುಬ್ರಹ್ಮಣ್ಯ ಭಟ್ ಹತ್ರಬೈಲು ಮಠ, ಶಬರೀಶ ಸುವರ್ಣ, ಸ್ವಾಗತ ಸಮಿತಿಯ ಅಧ್ಯಕ್ಷ ಸಂದೀಪ್ ಶೆಟ್ಟಿ, ವಿವಿಧ ಪ್ರಮುಖರು, ಗಣ್ಯರು, ಊರಿನ ಭಕ್ತ ಸಮೂಹ ಉಪಸ್ಥಿತರಿದ್ದರು.
ವಸಂತ ಶೆಟ್ಟೆ ಹೆರ್ಡೆ ಸ್ವಾಗತಿಸಿದರು. ಹರೀಶ ಶೆಟ್ಟಿ ವಾಟ್ಯಾಂಳ ಕಂಬಳಮನೆ ನಿರೂಪಿಸಿದರು. ಮಹೇಶ ಶೆಟ್ಟಿ ವಂದಿಸಿದರು.



