ಮುದ್ರಾಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಲ್ಲಾಡಿ ವಲಯದ ಶ್ರೀದೇವಿ ಸ್ವ-ಸಹಾಯ ಸಂಘದ 25ನೇ ವರ್ಷದ ವಾರ್ಷಿಕೋತ್ಸವ ಸ್ವಸಹಾಯ ಸಂಘದ ಸದಸ್ಯೆ ಭಾರತಿ ಅವರ ಸ್ವಗೃಹದಲ್ಲಿ ಇತ್ತೀಚೆಗೆ ನಡೆಯಿತು.
ಶ್ರೀ ಮಂಜುನಾಥ ಸ್ವಾಮಿಗೆ ಪೂಜೆ, ದೀಪ ಬೆಳಗಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಮಹಿಳಾ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಹೆಬ್ರಿ ತಾಲ್ಲೂಕು ಯೋಜನಾಧಿಕಾರಿ ರೇಷ್ಮಾ , ಮುದ್ರಾಡಿಯ ಹಿರಿಯ ಸಮಾಜ ಸೇವಕ ಗಣಪತಿ ಎಂ, ಶಿಕ್ಷಕರಾದ ಬಲ್ಲಾಡಿ ಚಂದ್ರಶೇಖರ ಭಟ್ , ಹಿರಿಯರಾದ ಲೋಕಯ್ಯ ಹಾಂಡ, ಸಂಘದ ಅಧ್ಯಕ್ಷ ಯೋಗೀಶ್ ಪಾಲ್ಗೊಂಡು ಸ್ವಸಹಾಯ ಸಂಘದ ಕಾರ್ಯವೈಖರಿಯನ್ನು ಶ್ಲಾಘಿಸಿ, ಶುಭ ಹಾರೈಸಿದರು.
ಒಕ್ಕೂಟದ ಅಧ್ಯಕ್ಷ ಯೋಗೀಶ್ ಹಾಗೂ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ತುರ್ತು ಸಂದರ್ಭದಲ್ಲಿ ಸ್ಪಂದಿಸಿ ಸೇವೆ ಸಲ್ಲಿಸುತ್ತಿರುವ ಬಲ್ಲಾಡಿ ಉದಯ ಕುಲಾಲ್ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿರುವ ಮುದ್ರಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಬಲ್ಲಾಡಿ ಚಂದ್ರಶೇಖರ ಭಟ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ 25 ವರ್ಷದ ಪಯಣದ ಯಶಸ್ಸಿಗೆ ಕಾರಣರಾದ ಎಲ್ಲಾ ಸದಸ್ಯರನ್ನು ಅಧ್ಯಕ್ಷರು ಅಭಿನಂದಿಸಿದರು.
ಸಂಘದ ಸದಸ್ಯೆ ಮಮತಾ ಕುಲಾಲ್ ಸ್ವಾಗತಿಸಿ, ಸೇವಾಪ್ರತಿನಿಧಿ ಮಮತಾ ವಂದಿಸಿದರು. ಮುದ್ರಾಡಿ ವಲಯದ ಮೇಲ್ವಿಚಾರಕರಾದ ಉಮೇಶ್ ಬಿ. ಕೆ. ನಿರೂಪಿಸಿದರು.




