ಶತಮಾನೋತ್ಸವದ ಕಾರ್ಯ ಪುಣ್ಯದ ಕೆಲಸ : ಉದಯ ಕುಮಾರ್ ಶೆಟ್ಟಿ.
ಶತಮಾನೋತ್ಸವಕ್ಕೆ ನೆರವಾಗುವ ಪ್ರಾಮಾಣಿಕ ಕಾರ್ಯವನ್ನು ಮಾಡುತ್ತೇವೆ. ಎಲ್ಲರೂ ಒಂದಾಗಿ ಕೈಜೋಡಿಸಿ : ಮಂಜುನಾಥ ಪೂಜಾರಿ.
ಪಡುಕುಡೂರು : ಪಡುಕುಡೂರು ನಮ್ಮೂರು, ಪಡುಕುಡೂರಿನಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಶಾಲೆಯ ಶತಮಾನೋತ್ಸವ ನಡೆಯುತ್ತಿರುವುದು ನಮಗೆಲ್ಲ ಸಂಭ್ರಮ, ಅದು ಪುಣ್ಯದ ಕೆಲಸ, ಅದರ ಭಾಗವಾಗಿ ನಾನು ಸೇವೆ ಮಾಡುತ್ತೇನೆ, ಆ.2 ಕಾರ್ಯಗಳು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಳ್ಳಬೇಕು ಎಲ್ಲಾ ರೀತಿಯ ನೆರವು ನೀಡುತ್ತೇನೆ ಎಂದು ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಹೇಳಿದರು.
ಅವರು ಭಾನುವಾರ ಶತಮಾನೋತ್ಸವ ಸಂಭ್ರಮದಲ್ಲಿರುವ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಸ್ಟಿಕ್ಕರ್ ಅನಾವರಣ ಕಾರ್ಯಕ್ರಮ ಮತ್ತು ಶಾಲಾ ಶತಮಾನೋತ್ಸವದ ಬೃಹತ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಪಡುಪರ್ಕಳ ಹರೀಶ ಶೆಟ್ಟಿ ಸಹಿತ ಮುಂಬಯಿ ಮತ್ತು ಪರವೂರಿನಲ್ಲಿ ನೆಲೆಸಿರುವ ಎಲ್ಲರೂ ಹುಟ್ಟೂರು ಪಡುಕುಡೂರನ್ನು ನಿತ್ಯ ನೆನೆದು ಊರಿಗಾಗಿ ಸೇವೆ ಮಾಡುತ್ತಿರುವುದು ಶ್ಲಾಘನೀಯ. ಪಡುಕುಡೂರಿನಲ್ಲಿ ನಡೆಯುವ ಕಾರ್ಯಗಳು ಒಳ್ಳೇಯ ರೀತಿಯಲ್ಲಿ ನಡೆಯುತ್ತದೆ ಎಂದು ಉದಯ ಕುಮಾರ್ ಶೆಟ್ಟಿ ಹೇಳಿದರು.
ಸರ್ಕಾರಿ ಶಾಲೆಗಳು ಉಳಿದು ಯಶಸ್ವಿಯಾಗಿ ಮುನ್ನಡೆಯಬೇಕು, ಅದಕ್ಕಾಗಿ ಸರ್ಕಾರವು ವಿಶೇಷ ಅನುದಾನ ನೀಡುತ್ತಿದೆ. ಕೆಪಿಎಸ್ ಶಾಲೆಗಳ ಮೂಲಕ ಸರ್ಕಾರಿ ಶಾಲೆಗಳು ಅತ್ಯುತ್ತಮವಾಗಿ ಮುನ್ನಡೆಯುತ್ತಿದೆ. ಸಾವಿರಾರು ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಅದು ಸರ್ಕಾರಿ ಶಾಲೆಯ ಶಕ್ತಿ ಎಂದು. ಅದೇ ರೀತಿ ಪಡುಕುಡೂರು ಶಾಲೆ ಕೂಡ ಮಾದರಿ ಶಾಲೆಯಾಗಿ ರೂಪುಗೊಳ್ಳಬೇಕಿದೆ. ನನಗೆ ಪ್ರೀತಿ ನೀಡಿದ ಪಡುಕುಡೂರಿಗಾಗಿ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದು ಉದಯ ಕುಮಾರ್ ಶೆಟ್ಟಿ ತಿಳಿಸಿದರು. ಪಡುಕುಡೂರು ಶಾಲೆಗೆ ಬಸ್ ವ್ಯವಸ್ಥೆಯನ್ನು ಕೂಡ ಅತೀ ಶೀಘ್ರವಾಗಿ ಮಾಡುತ್ತೇವೆ ಎಂದರು.
ಕಸ್ತೂರಿ ರಂಗನ್ ವರದಿಯಿಂದ ಜನರ ಬದುಕು ಅತಂತ್ರವಾಗಬಾರದು : ಉದಯ ಕುಮಾರ್ ಶೆಟ್ಟಿ.
ಕಸ್ತೂರಿರಂಗನ್ ವರದಿಯ ಭಯಾನಕ ಸ್ಥಿತಿ ಇಗ ನಮ್ಮ ಮುಂದಿದೆ. 7ನೇ ಅಧಿಸೂಚನೆ ಹೊರಡಿಸುವ ಮೂಲಕ ಸರ್ಕಾರ ಯೋಜನೆಯನ್ನು ಅನುಷ್ಠಾನ ಮಾಡುಲು ಹೊರಟಿದೆ. ಜನರು ಕಸ್ತೂರಿರಂಗನ್ ವರದಿಯ ಬಗ್ಗೆ ತಿಳಿದುಕೊಳ್ಳಬೇಕು, ಇದರಿಂದ ಜನರ ಬದುಕು ಅತಂತ್ರವಾಗಬಾರದು. ಜನರ ಸಮಸ್ಯೆ ಆಲಿಸಲು ಮುಖ್ಯಮಂತ್ರಿಯವರು ಇದೇ 18ರಂದು ಹೆಬ್ರಿಗೆ ಆಗಮಿಸಲಿದ್ದಾರೆ. ಜನತೆ ತಮ್ಮ ಅಹವಾಲು ಮುಖ್ಯಮಂತ್ರಿಯವರ ಮುಂದೆ ಸಲ್ಲಿಸಬೇಕು ಎಂದು ಉದಯ ಕುಮಾರ್ ಶೆಟ್ಟಿ ಹೇಳಿದರು.
ರಾಜ್ಯದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿ ಮಾತನಾಡಿ ಅಂದು ಶಿಕ್ಷಣದ ಅವಶ್ಯಕತೆ ಮತ್ತು ಅಗತ್ಯತೆಯನ್ನು ಮನಗಂಡು ಸ್ಥಾಪಿಸಿದ ಹಳ್ಳಿಯ ಶಾಲೆಗೆ ಈಗ ಶತಮಾನದ ಸಂಭ್ರಮ ನಮಗೆಲ್ಲ ಹೆಮ್ಮೆ. ಶಿಕ್ಷಣ ಇಲಾಖೆ ಹಾಗೂ ಸರ್ಕಾರದ ವಿವಿಧ ಹಂತದಲ್ಲಿ ನಾನು ಉದಯ ಕುಮಾರ್ ಶೆಟ್ಟಿ ಯವರು ಸೇರಿ ಶತಮಾನೋತ್ಸವಕ್ಕೆ ನೆರವಾಗುವ ಪ್ರಾಮಾಣಿಕ ಕಾರ್ಯವನ್ನು ಮಾಡುತ್ತೇವೆ. ಎಲ್ಲರೂ ಒಂದಾಗಿ ಕೈಜೋಡಿಸಿದಾಗ ಶತಮಾನೋತ್ಸವ ಸಂಭ್ರಮ ಅತ್ಯಂತ ಯಶಸ್ವಿಯಾಗುತ್ತದೆ. ದೇಶಕ್ಕೆ ಸ್ವಾತಂತ್ರ್ಯ ದೊರೆಯಲು ಪಡುಕುಡೂರಿನ ಎಂಡಿ ಅಧಿಕಾರಿ ದಂಪತಿಗಳ ಸೇವೆ ನಿತ್ಯ ಸ್ಮರಣಿಯ. ಅದು ಶಾಶ್ವತ ನೆನಪಿನ ಕಾರ್ಯ. ಶಿಕ್ಷಣದಿಂದ ಮಾತ್ರ ನಮ್ಮೇಲ್ಲರ ಅಭಿವೃದ್ಧಿ, ಸಾಧ್ಯ. ಅದನ್ನು ಮಹಾತ್ಮ ಗಾಂಧಿ, ಅಂಬೇಡ್ಕರ್, ನಾರಾಯಣಗುರುಗಳ ಸಹಿತ ಎಲ್ಲಾ ದಾರ್ಶನಿಕರು ಅಂದೇ ಹೇಳಿದ್ದರಿಂದ ಇಂದು ಶಿಕ್ಷಣದ ಮಹತ್ವ ಹೆಚ್ಚಾಗಿದೆ. ಎಲ್ಲಾ ಹಳೇ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ಮೂಲಕ ಶತಮಾನೋತ್ಸವವನ್ನು ಯಶಸ್ವಿಗೊಳಿಸಲು ಸರ್ವರೂ ಕೈಜೋಡಿಸಬೇಕು ಎಂದರು.
ಶತಮಾನೋತ್ಸವ ಸವಿನೆನಪಿಗೆ ಶಾಲೆಯ ಮಕ್ಕಳ ಸಂಖ್ಯೆಯನ್ನು 100 ದಾಟಿಸುವ ಕನಸು ಈಡೇರಿದೆ. ಅದೇ ರೀತಿಯಲ್ಲಿ ಶತಮಾನೋತ್ಸವ ಸಂಭ್ರಮದ ಯಶಸ್ಸಿನ ಕನಸು ಕೂಡ ಈಡೇರಬೇಕು, ಎಲ್ಲರೂ ಕೈಜೋಡಿಸಬೇಕು ಎಂದು ಶತಮಾನೋತ್ಸವ ಸಮಿತಿಯ ಸಂಚಾಲಕ ಪ್ರಸನ್ನ ಶೆಟ್ಟಿ ಮನವಿ ಮಾಡಿದರು. ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಭಾರವಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಪ್ರಸನ್ನ ಶೆಟ್ಟಿ ಜಯಲೀಲಾ, ಹೃದಯ ಕುಮಾರ್ ಶೆಟ್ಟಿ, ಸಂದೇಶ ಶೆಟ್ಟಿ ಕಜಾನೆ, ಅಶೋಕ್ ಎಂ ಶೆಟ್ಟಿ, ಶ್ರೀನಿವಾಸ ಆಚಾರ್, ಚೇತನ್ ಆಚಾರ್ಯ ಕುಕ್ಕುದಕಟ್ಟೆ, ಸತೀಶ ಪೂಜಾರಿ ಎಳ್ಳಾರೆ, ಜ್ಯೋತಿ ಪ್ರಸಾದ್ ಶೆಟ್ಟಿ ಅವರಿಗೆ ವಿವಿಧ ಪ್ರದೇಶಗಳ ಆರ್ಥಿಕ ಸಂಪನ್ಮೂಲ ಸಂಗ್ರಹದ ಹೊಣೆಗಾರಿಕೆಯನ್ನು ಇದೇ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು. ಗೌರವ ಸಲಹೆಗಾರರಾದ ಪಡುಕುಡೂರು ಶ್ರೀ ಭದ್ರಕಾಳಿ ದೇವಸ್ಥಾನದ ಅರ್ಚಕ ಸೂರಿಮಣ್ಣು ಸದಾಶಿವ ಉಪಾಧ್ಯಾಯ, ನಿವೃತ್ತ ಮುಖ್ಯ ಶಿಕ್ಷಕ ಕೇಶವ ನಾಯಕ್, ಜಗದೀಶ ಹೆಗ್ಡೆ ಪಟೇಲರ ಮನೆ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ, ಉಪಾಧ್ಯಕ್ಷೆ ಶಿಲ್ಪಾ, ಕೋಶಾಧಿಕಾರಿ ಸಂತೋಷ ಆಚಾರ್ಯ ಮಾವಿನಕಟ್ಟೆ, ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು, ಶಿಕ್ಷಣಾಭಿಮಾನಿಗಳು, ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶಾಲಾ ಮುಖ್ಯ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ, ಹಳೆವಿದ್ಯಾರ್ಥಿ ಸಂಘ ಮತ್ತು ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು,ಸದಸ್ಯರು ಭಾಗವಹಿಸಿದ್ದರು.
ಮುಖ್ಯ ಶಿಕ್ಷಕ ಹರೀಶ ಪೂಜಾರಿ ಎಸ್ ಸ್ವಾಗತಿಸಿ ಶತಮಾನೋತ್ಸವದ ಸಮಗ್ರ ಮಾಹಿತಿ ನೀಡಿದರು. ಮುನಿಯಾಲು ಕೆಪಿಎಸ್ ಶಾಲೆಯ ಶಿಕ್ಷಕ ಪ್ರಕಾಶ ಪೂಜಾರಿ ಮಾತಿಬೆಟ್ಟು ನಿರೂಪಿಸಿ ಶಿಕ್ಷಕಿ ರಂಜಿತಾ ಎಸ್ ವಂದಿಸಿದರು. ಶಿಕ್ಷಕಿ ಭಾವನಾ ಪ್ರಾರ್ಥಿಸಿದರು.




