Wednesday, September 23, 2026
Homeವರಂಗ ಗ್ರಾಮ ಪಂಚಾಯತ್‌ವರಂಗ ಸಹಕಾರಿ ವ್ಯವಸಾಯಿಕ ಸಂಘ : 268 ಕೋಟಿ ವ್ಯವಹಾರ : 58 ಲಕ್ಷ ರೂಪಾಯಿ...

ವರಂಗ ಸಹಕಾರಿ ವ್ಯವಸಾಯಿಕ ಸಂಘ : 268 ಕೋಟಿ ವ್ಯವಹಾರ : 58 ಲಕ್ಷ ರೂಪಾಯಿ ಲಾಭಾಂಶ.

ಮುಂದಿನ ಆರ್ಥಿಕ ವರ್ಷದಲ್ಲಿ 300 ಕೋಟಿ ವ್ಯವಹಾರ : ಶುಭದರ ಶೆಟ್ಟಿ

ವರಂಗ : ವರಂಗ ಸಹಕಾರಿ ವ್ಯವಸಾಯಿಕ ಸಂಘ ಮುಂದಿನ ಆರ್ಥಿಕ ವರ್ಷದಲ್ಲಿ 300 ಕೋಟಿ ವಹಿವಾಟು ನಡೆಸಿ 1 ಕೋಟಿ ನಿವ್ವಳ ಲಾಭವನ್ನು ಪಡೆಯುವ ಯೋಜನೆಯನ್ನು ಹೊಂದಿದೆ, ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿ ಈ ಆರ್ಥಿಕ ವರ್ಷದಲ್ಲಿ 268 ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಸಿ 58 ಲಕ್ಷ ರೂಪಾಯಿ ಲಾಭಾಂಶ ಗಳಿಸಿ ಉತ್ತಮ ಆಡಳಿತ ನೀಡಿದೆ ಎಂದು ವರಂಗ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಮುದ್ರಾಡಿ ಶುಭದರ ಶೆಟ್ಟಿ ಹೇಳಿದರು.ಅವರು ವರಂಗ ಸಹಕಾರಿ ವ್ಯವಸಾಯನಿಕ ಸಂಘದ ವತಿಯಿಂದ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸಂಘವು ವರಂಗದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿ ಮುದ್ರಾಡಿ, ಮುನಿಯಾಲು, ಕಬ್ಬಿನಾಲೆಯಲ್ಲಿ ಶಾಖೆಯನ್ನು ಹೊಂದಿದೆ. ೩೪೭೩ ಮಂದಿ ಎ ತರಗತಿಯ ಸದಸ್ಯರು ಸಂಘದಲ್ಲಿ ಇದ್ದಾರೆ. 1,90,62,397 ರೂಪಾಯಿ ಪಾಲು ಬಂಡವಾಳ ಇದೆ. ವರಂಗದಲ್ಲಿರುವ ಕೇಂದ್ರ ಕಚೇರಿಗೆ ಸುಸಜ್ಜಿತ ಕಟ್ಟಡವನ್ನು ನಿರ್ಮಿಸುವ ಯೋಜನೆಯನ್ನು ಸಂಘವು ಹೊಂದಿದೆ ಎಂದು ಶುಭದರ ಶೆಟ್ಟಿ ಹೇಳಿದರು. 800 ಮಂದಿ ಸದಸ್ಯರಿಗೆ ಯಶಸ್ವಿನಿ ಯೋಜನೆಯನ್ನು ನೀಡಲಾಗಿದೆ. ಹವಮಾನ ಆಧರಿತ ಬೆಳೆ ವಿಮೆ, ಸಾಲಗಾರರಿಗೆ ವಿಮೆ, ಗುಂಪು ವಿಮೆ, ಶೂನ್ಯ ಬಡ್ಡಿ ದರದಲ್ಲಿ ಸಾಲ, ಶೇ 3 ಬಡ್ಡಿ ದರದಲ್ಲಿ ಸಾಲ, ಕೃಷಿ ಸಾಲಗಳನ್ನು ನೀಡಿ ರೈತರ ಬೆಳವಣಿಗೆಯಲ್ಲಿ ಸಹಕಾರಿ ನಿರಂತರವಾಗಿ ಶ್ರಮ ವಹಿಸಿದೆ ಎಂದು ಶುಭದರ ಶೆಟ್ಟಿ ತಿಳಿಸಿದರು.

200ಕ್ಕೂ ಹೆಚ್ಚು ಸದಸ್ಯರನ್ನು ಸರ್ಕಾರದ ವಿವಿಧ ವಿಮಾ ಯೋಜನೆಗಳಿಗೆ ಸೇರಿಸಲಾಗಿದೆ. 13.75 ಕೋಟಿ ರೂಪಾಯಿ ಸಾಲವನ್ನು ೦%ನಲ್ಲಿ ಸಾಲ ನೀಡಿದ್ದೇವೆ. ೩.೩೬ ಕೋಟಿ ರೂಪಾಯಿಯನ್ನು 2% ಸಾಲ ನೀಡಿದ್ದೇವೆ. 1.50 ಕೋಟಿ ರೂಪಾಯಿಯನ್ನು ನವೋದಯ ಸ್ವಸಹಾಯ ಸಂಘಗಳ ಮೂಲಕ ನೀಡಿದ್ದೇವೆ ಎಂದು ಅಧ್ಯಕ್ಷ ಶುಭದರ ಶೆಟ್ಟಿ ಮಾಹಿತಿ ನೀಡಿದರು. ವಿದ್ಯಾರ್ಥಿ ವೇತನ, ಸಹಾಯಧನ ವಿತರಣೆ ಸಹಿತ ಸಾರ್ವಜನಿಕ ಕಳಕಳಿಯ ಸೇವೆಯನ್ನು ಸಂಘವು ಮಾಡುತ್ತ ಬಂದಿದೆ. ಗ್ರಾಹಕರಿಗೆ ನಿರಂತರವಾಗಿ ನಗುಮುಖದ ಸೇವೆಯನ್ನು ನೀಡುತ್ತ ಜನಮೆಚ್ಚುಗೆಯನ್ನು ಸಂಘವು ಪಡೆದಿದೆ ಎಂದು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಗೋಪಾಲಕೃಷ್ಣ ಪೈ ಹೇಳಿದರು. ಹೈನುಗಾರಿಕೆಗೂ ವಿಶೇಷ ಪ್ರೋತ್ಸಾಹ ನೀಡಿ ಸಾಲವನ್ನು ರೈತರಿಗೆ ನೀಡಿದ್ದೇವೆ.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ರಾಜೇಂದ್ರ ಕುಮಾರ್ ಅವರು ನಿರಂತರವಾಗಿ ನಮ್ಮ ಸಂಸ್ಥೆಯ ಬೆಳವಣಿಗೆಯಲ್ಲಿ ಕೈಜೋಡಿಸಿದ್ದಾರೆ. ಎಸ್‌ಸಿಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿ, ಪ್ರಧಾನ ವ್ಯವಸ್ಥಾಪಕರು, ಆಡಳಿತ ವರ್ಗದವರು, ಸಹಕಾರಸಂಘಗಳ ವಲಯ ಮೇಲ್ವೀಚಾರಕ ಜಯಂತ್‌ ಕುಮಾರ್‌ ಅವರ ವಿಶೇಷ ಸಹಕಾರದಿಂದ ನಮ್ಮ ಸಂಘವು ಯಶಸ್ವಿಯಾಗಿ ಅಭಿವೃದ್ಧಿಯಲ್ಲಿ ಮುನ್ನಡೆಯುತ್ತಿದೆ. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮತ್ತು ಸಿಬಂದ್ಧಿ ವರ್ಗದವರ ಸಮರ್ಪಣಾ ಭಾವದ ಸೇವೆಯಿಂದ ಸಂಘವು ಮುನ್ನಡೆಯುತ್ತಿದೆ.

ಉಪಾಧ್ಯಕ್ಷ ಕೃಷ್ಣಕಾಂತ್ ನಾಯಕ್, ಹೆಚ್ಚುವರಿ ಕಾರ್ಯದರ್ಶಿ ಜಯಂತ್ ಕುಮಾರ್, ಸಿಇಓ ಕೆ. ಗೋಪಾಲಕೃಷ್ಣ ಪೈ, ನಿರ್ದೇಶಕರಾದ ಕೆ. ಚಂದ್ರಶೇಖರ ಬಾಯರಿ, ಲಕ್ಷ್ಮಣ ಆಚಾರ್ಯ, ಕೃಷ್ಣ ಆಚಾರ್ಯ, ಸುರೇಶ ಶೆಟ್ಟಿಗಾರ್, ಜಗದೀಶ ಹೆಗ್ಡೆ, ಸುಧನ್ವ ಪಾಣರ, ಸುರೇಶ್ ಬಿ. ನಾಯ್ಕ, ಇಂದಿರಾ ಪೂಜಾರ್ತಿ, ಶಶಿಕಲಾ ಡಿ ಪೂಜಾರಿ, ಮುನಿಯಾಲು ಗೋಪಿನಾಥ್ ಭಟ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!