ಹೆಬ್ರಿ ಪದವಿ ಪೂರ್ವ ಕಾಲೇಜು ಮೈದಾನಕ್ಕೆ ಐತಿಹಾಸಿಕ ಹಿನ್ನೆಲೆ.!
ಹೆಬ್ರಿಗೆ ರಾಜ್ಯದ ದೊರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಮನಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಹೆಬ್ರಿಗೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ 2ನೇ ಮುಖ್ಯಮಂತ್ರಿ ಎಂಬ ಖ್ಯಾತಿಯು ಡಿ.ಕೆ.ಶಿವಕುಮಾರ್ ಪಾಲಿಗೆ ಸೇರುತ್ತದೆ. ಕಾರ್ಕಳದ ಶಾಸಕರಾಗಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಡಾ.ಎಂ.ವೀರಪ್ಪ ಮೊಯಿಲಿಯವರು ಹೆಬ್ರಿಗೆ ಹೆಲಿಕಾಪ್ಟರ್ ನಲ್ಲಿ ಪ್ರಥಮ ಭಾರಿಗೆ ಬಂದಿದ್ದರು.
1978ರಲ್ಲಿ ಇಂದಿರಾಗಾಂಧಿ ಆಗಮನ !
ಅಂದು 1978ರಲ್ಲಿ ಇಂದಿರಾ ಗಾಂಧಿಯವರು ಹೆಬ್ರಿಗೆ ಆಗಮಿಸಿ ಇದೇ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದರು.
ಇಂದಿರಾ ಗಾಂಧಿಯವರು ಆಗಮಿಸುವಾಗ ಕತ್ತಲಾಗಿದ್ದರೂ ಅಂದು ಸಾವಿರಾರು ಮಂದಿ ಸೇರಿದ್ದರು. ಮಹಿಳೆಯರು ಕೂಡ ಸಾವಿರಾರು ಮಂದಿ ಇಂದಿರಾ ಗಾಂಧಿಯವರನ್ನು ನೋಡಲು ರಾತ್ರಿಯ ತನಕವೂ ಕಾದಿದ್ದರು ಎಂದು ಅಂದಿನ ನೆನಪನ್ನು ಹಿರಿಯರು ” ಹೆಬ್ರಿ ನ್ಯೂಸ್ ” ಜೊತೆಗೆ ಹಂಚಿಕೊಂಡರು.
ಈಗ ಅದೇ ಐತಿಹಾಸಿಕ ಸ್ಥಳವಾದ ಕಾಲೇಜು ಮೈದಾನದಲ್ಲಿ ಅಂದು ಯುವಕ ನಾಯಕರಾಗಿದ್ದ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಆಗಮಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಕಾಲೇಜು ಮೈದಾನ ಮತ್ತೇ ನೆನಪಿಗೆ ಬಂದಿದೆ. ಅಂದಿನ ನೆನಪನ್ನು ಹಲವರು ಮೆಲುಕು ಹಾಕಿದ್ದಾರೆ.
ಅಂದು ಮೈಸೂರು ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ನಿಜಲಿಂಗಪ್ಪ ನವರು ಇದೇ ಶಾಲೆಗೆ 1957 ರ ಜನವರಿ 15 ರಂದು ಭೂಮಿ ಪೂಜೆ ಮಾಡಿದ ನಾಮಫಲಕ ಶಾಲೆಯ ಗೋಡೆಯಲ್ಲಿದೆ. ಒಟ್ಟಿನಲ್ಲಿ ಮುಖ್ಯಮಂತ್ರಿ ಆಗಮನ ಹಲವು ಪುರಾತನ ವಿಚಾರಗಳು ಬೆಳಕಿಗೆ ಬಂದಿದೆ.
ಬರದ ಸಿದ್ಧತೆ : ಮುಖ್ಯಮಂತ್ರಿ ಹೆಬ್ರಿಗೆ ಆಗಮನದ ಹಿನ್ನೆಲೆಯಲ್ಲಿ ಬರದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಉಡುಪಿ ಎಸ್ ಪಿ. ಹರಿರಾಮ್ ಶಂಕರ್ ನೇತ್ರತ್ವದಲ್ಲಿ ಪೊಲೀಸ್ ಉನ್ನತ ಅಧಿಕಾರಿಗಳ ತಂಡ ನಿರಂತರವಾಗಿ ಹೆಬ್ರಿಗೆ ಆಗಮಿಸಿ ಪೂರ್ವ ಸಿದ್ಧತೆಯನ್ನು ಪರಿಶೀಲನೆ ನಡೆಸುತ್ತಿದೆ. ಬುಧವಾರ ಪಶ್ಚಿಮ ವಲಯದ ಐಜಿಪಿ ಚೇತನ್ ಹೆಬ್ರಿಗೆ ಆಗಮಿಸಿ ಬಂದೋಬಸ್ತ್ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದ್ದಾರೆ.
ಹಲವು ಕಡೆ ಪಾರ್ಕಿಂಗ್ : ಮುಖ್ಯಮಂತ್ರಿ ಆಗಮನದಿಂದ ಸಾವಿರಾರು ಮಂದಿ ಭಾಗವಹಿಸುವ ಹಿನ್ನೆಲೆಯಲ್ಲಿ ಕಾಲೇಜು ಸಮೀಪದಲ್ಲಿ ಸೇರಿದಂತೆ ಹಲವು ಕಡೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
5 ಸಾವಿರಕ್ಕೂ ಹೆಚ್ಚು ಜನ ಆಗಮನದ ನಿರೀಕ್ಷೆ : ಬೃಹತ್ ಪೆಂಡಾಲ್ !
ಕಸ್ತೂರಿ ರಂಗನ್ ವರದಿಯ ಆತಂಕದಿಂದ ಉಡುಪಿ ದಕ್ಷಿಣಕನ್ನಡ ಶಿವಮೊಗ್ಗ ಸೇರಿದಂತೆ ಹಲವಾರು ಕಡೆಗಳಿಂದ ಸಾರ್ವಜನಿಕರು ಆಗಮಿಸುವ ನಿರೀಕ್ಷೆ ಇದ್ದು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಮೂಡಬಿದಿರೆಯ ಆರ್ ಕೆ. ಎಂಟರ್ ಪ್ರೈಸಸ್ ಸೌಂಡ್ಸ್ ಲೈಟ್ಸ್ ಸಂಸ್ಥೆಯವರು ಮಂಗಳವಾರದಿಂದ ಪೆಂಡಾಲ್ ನಿರ್ಮಾಣ ಸಹಿತ ಸಕಲ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ.

ಡಿಗ್ರಿ ಕಾಲೇಜು ಮೈದಾನದಲ್ಲಿ ಹೆಲಿಪ್ಯಾಡ್ !
ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಬಹುತೇಕ ಅಂತಿಮಗೊಂಡಿದೆ.
ಹೆಲಿಪ್ಯಾಡ್ ನಲ್ಲಿ ಡಿ.ಕೆ.ಶಿವಕುಮಾರ್ ಇಳಿದು ಕಾರ್ಯಕ್ರಮ ನಡೆಯುವ ಪದವಿ ಪೂರ್ವ ಕಾಲೇಜಿನ ಮೈದಾನಕ್ಕೆ ಮುಖ್ಯಮಂತ್ರಿಗಳು ಆಗಮಿಸಲಿದ್ದಾರೆ ಎಂದು ಮಾಹಿತಿ ದೊರಕಿದೆ.
ಮುದ್ರಾಡಿ ಮಂಜುನಾಥ ಪೂಜಾರಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ ಸಿದ್ಧತೆ ಪರಿಶೀಲನೆ !
ರಾಜ್ಯದ ದೊರೆಯ ಆಗಮನದ ಹಿನ್ನೆಲೆಯಲ್ಲಿ ರಾಜ್ಯದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹಾಗೂ ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿ ಯವರು ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಆಗಮಿಸಿ ಸಿದ್ಧತೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸ್, ಕಂದಾಯ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಯ ಉನ್ನತ ಅಧಿಕಾರಿಗಳ ತಂಡವೇ ಹೆಬ್ರಿಯಲ್ಲಿ ಬೀಡುಬಿಟ್ಟಿದೆ.

ಕಾರ್ಯಕರ್ತರ ಆಗಮನ :
ರಾಜ್ಯದ ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಹೆಬ್ರಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನವೀನ್ ಅಡ್ಯಂತಾಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್, ಮುಖಂಡ ಪ್ರವೀಣ್ ಬಲ್ಲಾಳ್ ಸೇರಿದಂತೆ ಕಾಂಗ್ರೆಸ್ ವಿವಿಧ ಘಟಕದ ಪ್ರಮುಖರು, ಕಾರ್ಯಕರ್ತರು, ಮಹಿಳಾ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ತಂಡತಂಡವಾಗಿ ಮೈದಾನಕ್ಕೆ ಆಗಮಿಸುತ್ತಿದ್ದಾರೆ.
ಡಿ.ಕೆ.ಅಭಿಮಾನಿ ಬಳಗವು ಶಕ್ತಿ ಪ್ರದರ್ಶನಕ್ಕೆ ಸಿದ್ಧಗೊಂಡಿದೆ. ಅಂದು ಹೆಬ್ರಿ ತಾಲ್ಲೂಕು ಕಚೇರಿಯ ಲೋಕಾರ್ಪಣೆಗೆ ಹೆಬ್ರಿಗೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಸೇರಿ ಒಟ್ಟು ಮೂವರು ಮುಖ್ಯಮಂತ್ರಿಗಳು ಹೆಬ್ರಿಗೆ ಆಗಮಿಸಿದ ದಾಖಲೆ ಸಿಗುತ್ತದೆ. ಬಸವರಾಜ ಬೊಮ್ಮಾಯಿ ಕಾರ್ಕಳದಿಂದ ಕಾರಿನ ಮೂಲಕ ಹೆಬ್ರಿಗೆ ಆಗಮಿಸಿದ್ದರು.
ಜಗದೀಶ್ ಶೆಟ್ಟರ್, ಪ್ರತಿ ಪಕ್ಷದ ನಾಯಕ ಆರ್ ಅಶೋಕ್, ಎನ್.ಧರಂ ಸಿಂಗ್, ಹೆಚ್.ಕೆ.ಪಾಟೀಲ್, ಯು.ಟಿ.ಖಾದರ್, ಆಸ್ಕರ್ ಫರ್ನಾಂಡೀಸ್, ಬಿ. ಜನಾರ್ದನ ಪೂಜಾರಿ, ಕೆ.ಎಸ್.ಈಶ್ವರಪ್ಪ, ಸೇರಿದಂತೆ ರಾಜ್ಯದ ಘಟಾನುಘಟಿ ಹಲವು ನಾಯಕರು ಹೆಬ್ರಿಗೆ ಆಗಮಿಸಿದ್ದ ನೆನಪುಗಳಿವೆ.
ರಥಯಾತ್ರೆಯ ಸಂದರ್ಭದಲ್ಲಿ ಎಲ್.ಕೆ.ಅಡ್ವಾಣಿ ಅವರು ಹೆಬ್ರಿಗೆ ಆಗಮಿಸಿದ್ದರು.
ಮೈಸೂರು ರಾಜವಂಶದ ಕೊನೆಯ ಕೊಂಡಿಯಾಗಿ ಸಂಸದ ರಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಗುಟ್ಟಾಗಿ ಬಲ್ಲೆ ಪಾತಾಳ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದ್ದರು.
ಯುವರಾಜ ಯದುವೀರ ಶ್ರೀಕಂಠದತ್ತ ಒಡೆಯರ್ ತಿಂಗಳೆಗೆ ಹೋಗುವಾಗ ಹೆಬ್ರಿಗೆ ಆಗಮಿಸಿದ್ದರು.
ಮಾಜಿ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ ಮತ್ತು ಪ್ರತಿ ಪಕ್ಷದ ನಾಯಕರಾಗಿದ್ದ ಸಿದ್ಧ ರಾಮಯ್ಯನವರು ಹೆಬ್ರಿಗೆ ಆಗಮಿಸಿದ್ದ ದಾಖಲೆಗಳಿವೆ.
ಗಣೇಶೋತ್ಸವವದ ಸಂಭ್ರಮದ ನಡುವೆ ರಾಜ್ಯದ ದೊರೆಯ ಆಗಮನ ಅತ್ಯಂತ ಕುತೂಹಲ ಮತ್ತು ನಿರೀಕ್ಷೆಯನ್ನು ಹೆಚ್ಚಿಸಿದೆ. ದೊರೆಯ ಆಗಮನದಿಂದ ಕಸ್ತೂರಿರಂಗನ್ ವರದಿಯ ಆತಂಕ ದೂರವಾಗಿ ಜನ ನೆಮ್ಮದಿಯ ಬದುಕು ಸಾಗಿಸುವಂತಾಗಲಿ ಎಂಬುದು ಎಲ್ಲರ ಆಶಯವೂ ಆಗಿದೆ. ಹಾಗಾಗಿ ದೊರೆಯ ಆಗಮನಕ್ಕೆ ಜನಬೆಂಬಲ ವ್ಯಕ್ತವಾಗಿದೆ. ಗ್ರಾಮಗ್ರಾಮಗಳಲ್ಲೂ ಜನರ ಆಗಮನಕ್ಕೆ ಸಕಲ ಸಿದ್ದತೆಗಳು ನಡೆಯುತ್ತಿದೆ.
ಹೆಬ್ರಿ ಸಬ್ ಇನ್ಸ್ ಫೆಕ್ಟರ್ ಲೊಹೀತ್ ಕುಮಾರ್ ಮತ್ತವರ ತಂಡ ಬುಧವಾರ ತಂಡ ರಾತ್ರಿಯ ತನಕವೂ ಮೈದಾನದಲ್ಲಿ ಕರ್ತವ್ಯದಲ್ಲಿದ್ದರು. ಸಾರ್ವಜನಿಕರು, ಸಂಘಸಂಸ್ಥೆಯವರು ಹೆಬ್ರಿಯ ಹಲವಾರು ಬೇಡಿಕೆಗಳನ್ನು ದೊರೆಗೆ ಸಲ್ಲಿಸಲು ಅರ್ಜಿಗಳನ್ನು ಸಿದ್ಧಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಅರ್ಜಿ ನೀಡಲು ಪ್ರತ್ಯೇಕ ಕೌಂಟರ್ ವ್ಯವಸ್ಥೆ. ಮುಖ್ಯಮಂತ್ರಿಯವರಿಗೆ ನೇರವಾಗಿ ಸೀಮಿತ ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಉಳಿದವರಿಗೆ ಮನವಿ ನೀಡಲು ಪ್ರತ್ಯೇಕ ಕೌಂಟರ್ ತೆಗೆಯಲಾಗುತ್ತದೆ.
3.500 ಕ್ಕೂ ಹೆಚ್ಚು ಮಂದಿಗೆ ಊಟದ ವ್ಯವಸ್ಥೆ.
ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಮಧ್ಯಾಹ್ನ 3.500ಕ್ಕೂ ಹೆಚ್ಚು ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ. ಊಟ ಕುಡಿಯುವ ನೀರಿಗಾಗಿ ಪ್ರತ್ಯೇಕ ಕೌಂಟರ್ ಮಾಡಲಾಗಿದೆ.




