Thursday, September 24, 2026
Homeಹೆಬ್ರಿವಿಬಿಜಿ ರಾಮ್ ಜಿಯಡಿ ರಾಜ್ಯ ವಸತಿ ಯೋಜನೆಗೂ ಅವಕಾಶ: ಈಶ್ವರ ಖಂಡ್ರೆ

ವಿಬಿಜಿ ರಾಮ್ ಜಿಯಡಿ ರಾಜ್ಯ ವಸತಿ ಯೋಜನೆಗೂ ಅವಕಾಶ: ಈಶ್ವರ ಖಂಡ್ರೆ

ಗ್ರಾಮಠಾಣಾ ಆಸ್ತಿಗೆ ಇ-ಸ್ವತ್ತು, ನಿಯಮ ತಿದ್ದುಪಡಿಗೆ ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು : ಗ್ರಾಮೀಣ ಉದ್ಯೋಗ ಖಾತ್ರಿ ಮನ್ರೇಗಾದ ಬದಲಾದ ರೂಪ ವಿಬಿಜಿ ರಾಮ್ ಜಿಯಲ್ಲಿ ರಾಜ್ಯದ ವಸತಿ ಯೋಜನೆಗಳನ್ನು ಕೈಗೆತ್ತಿಗೊಳ್ಳಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದ್ದು, ರಾಜ್ಯದ ಶಿಫಾರಸಿಗೆ ಮನ್ನಣೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಉನ್ನತಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದ ಇತಹ ಹಿಂದುಳಿದ ವರ್ಗದ ಬಡವರಿಗೆ ಸಮರ್ಪಿತವಾದ ಬಸವ ವಸತಿ ಯೋಜನೆ, ಅಲೆಮಾರಿ ಮತ್ತು ಅರೆ ಅಲೆಮಾರಿ ಕುಟುಂಬಗಳಿಗೆ ಮನೆ ನಿರ್ಮಿಸಲು ನೆರವಾಗುವ ದೇವರಾಜ ಅರಸು ವಸತಿ ಯೋಜನೆ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗದ ಗ್ರಾಮೀಣ ಜನರಿಗೆ ವಸತಿ ಕಲ್ಪಿಸುವ ಡಾ. ಅಂಬೇಡ್ಕರ್ ನಿವಾಸ ಯೋಜನೆಯಡಿ ಮನೆ ನಿರ್ಮಿಸಲೂ ಈಗ ವಿಬಿಜಿ ರಾಮ್ ಜಿಯಲ್ಲಿ ಅವಕಾಶವಿದೆ ಎಂದರು.

ಕೇಂದ್ರ ಸರ್ಕಾರ ವಿಬಿಜಿ ರಾಮ್ ಜಿಯಡಿ ಅನುಮೋದಿಸಿದ್ದ 318 ಕಾಮಗಾರಿಗಳ ಸಂಖ್ಯೆಯನ್ನು ಈಗ 375ಕ್ಕೆ ಹೆಚ್ಚಳ ಮಾಡಿದೆ. ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದ ರಾಜ್ಯ ವಸತಿ ಯೋಜನೆ, ಸಮುದಾಯ ಕುಶಲಕರ್ಮಿಗಳ ಕೇಂದ್ರ ನಿರ್ಮಾಣ, ವೈಯಕ್ತಿಕ ಕಾಮಗಾರಿಯಡಿ ರೇಷ್ಮೆ ಹುಳು ಸಾಕಾಣಿಕೆ ಮನೆ (ಘಟಕ) ಹಾಗೂ ಒಂದೇ ಭೂಮಿಯಲ್ಲಿ ಮರಗಳು, ಹುಲ್ಲುಗಾವಲು (ಮೇವು) ಮತ್ತು ಜಾನುವಾರು ಸಾಕಣೆಯನ್ನು ಸಂಯೋಜಿಸಿ ಬೆಳೆಸುವ ಸಿಲ್ವಿ ಪ್ಯಾಷ್ಚರ್ ಸಹ ಸೇರಿದೆ ಎಂದರು.

ಈ ಬಗ್ಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಗ್ರಾಮೀಣ ಜನರಿಗೆ ಸ್ಪಷ್ಟ ಮಾಹಿತಿ ನೀಡಿ ಗ್ರಾಮೀಣ ಉದ್ಯೋಗ ಖಾತ್ರಿಯಡಿ ಹೆಚ್ಚಿನ ಮಾನವ ದಿನ ಸೃಜಿಸುವಂತೆ ಮತ್ತು ಯಾವುದೇ ಗ್ರಾಮೀಣ ಬಡ ಜನರು ಉದ್ಯೋಗ ಸಿಗದೆ ಗುಳೆ ಅಥವಾ ವಲಸೆ ಹೋಗದಂತೆ ತಡೆಯಲು ಕ್ರಮ ವಹಿಸುವಂತೆ ತಿಳಿಸಿದರು.

ಗ್ರಾಮಠಾಣಾ ಆಸ್ತಿಗೆ ಇ-ಸ್ವತ್ತು, ನಿಯಮ ತಿದ್ದುಪಡಿ:
ಅಕ್ಟೋಬರ್ 2ರಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭಿಸಿ, ನವೆಂಬರ್ ತಿಂಗಳಲ್ಲಿ 10 ಲಕ್ಷ ಗ್ರಾಮಠಾಣಾ ಆಸ್ತಿಗಳಿಗೆ ನಿಯಮಾನುಸಾರ ಇ-ಸ್ವತ್ತು ನೀಡಲು ಮತ್ತು ಅಭಿಯಾನ ನಡೆಸಲು ಅನುವಾಗುವಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತೆರಿಗೆ ಮತ್ತು ಶುಲ್ಕಗಳು) ನಿಯಮ 2025ಕ್ಕೆ ಅಗತ್ಯ ಮತ್ತು ಸೂಕ್ತ ತಿದ್ದುಪಡಿ ಮಾಡುವಂತೆಯೂ ಈಶ್ವರ ಖಂಡ್ರೆ ಸೂಚನೆ ನೀಡಿದರು.

ಸಭೆಯಲ್ಲಿ ಕಾರ್ಯದರ್ಶಿ ಡಿ.ರಂದೀಪ್, ಆಯುಕ್ತರಾದ ಡಾ. ಅರುಂಧತಿ ಚಂದ್ರಶೇಖರ್, ಇ-ಸ್ವತ್ತು ನಿರ್ದೇಶಕರಾದ ಗಿರೀಶ್ ಬದೋಲೆ ಮತ್ತಿತರ ಅಧಿಕಾರಿಗಳು ಭಾಗಿಯಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!