ಶಿವಮೊಗ್ಗ : ಬಗರ್ ಹುಕುಂ ಸಾಗುವಳಿದಾರರು ಸೇರಿದಂತೆ ಸಾಂಪ್ರದಾಯಿಕ ಅರಣ್ಯ ಒತ್ತುವರಿದಾರರಿಗೆ ಯಾವುದೇ ಕಾರಣಕ್ಕೆ ನೋಟಿಸ್ ನೀಡದಂತೆ ಹಾಗೂ ಹೊಸದಾಗಿ ಒತ್ತುವರಿ ಅವಕಾಶ ನೀಡದಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತೀರ್ಥಹಳ್ಳಿಯಲ್ಲಿ ಶನಿವಾರ ನಡೆದ ‘ಕಸ್ತೂರಿರಂಗನ್ ವರದಿ ಹಾಗೂ ಮಲೆನಾಡಿನ ಸಮಸ್ಯೆಗಳು’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 94ಸಿ ಹಾಗೂ ಬಗರ್‌ಹುಕುಂ ಭೂಮಿ ಮತ್ತು ಹಕ್ಕುಪತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಮುಂದಿನ ದಿನಗಳಲ್ಲಿ ಪ್ರತ್ಯೇಕ ಚರ್ಚೆ ನಡೆಸಲಾಗುವುದು ಎಂದರು.
ಕಸ್ತೂರಿರಂಗನ್ ವರದಿಯಿಂದ ಮಲೆನಾಡಿನ ಜನರ ಬದುಕಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಜೊತೆಗೆ ಪರಿಸರವನ್ನೂ ರಕ್ಷಿಸಲು ಸರ್ಕಾರ ಶಕ್ತಿಮೀರಿ ಕೆಲಸ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.
ಜನರ ಬಳಿಗೇ ಬಂದು ಅಭಿಪ್ರಾಯ ಸಂಗ್ರಹ:
ಕೇಂದ್ರ ಸರ್ಕಾರ ಈಗಾಗಲೇ ಕಸ್ತೂರಿರಂಗನ್ ವರದಿಯ ಕರಡು ಅಧಿಸೂಚನೆ ಹೊರಡಿಸಿದೆ. ವಿಧಾನಸೌಧದಲ್ಲಿ ಕುಳಿತು ವರದಿಯನ್ನು ವಿರೋಧಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಜನರಿಂದ ಅಧಿಕಾರಕ್ಕೆ ಬಂದಿರುವ ಕಾರಣ, ನೇರವಾಗಿ ಜನರ ಬಳಿಗೇ ಬಂದು ಅವರ ಆತಂಕ ಹಾಗೂ ಅಭಿಪ್ರಾಯಗಳನ್ನು ತಿಳಿದುಕೊಂಡು ಕೇಂದ್ರಕ್ಕೆ ರಾಜ್ಯದ ನಿಲುವನ್ನು ತಿಳಿಸುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇನೆ ಎಂದರು.
ಪ್ರವಾಸೋದ್ಯಮಕ್ಕೆ ಉತ್ತೇಜನ:
ಮಲೆನಾಡಿನಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ವಿಸ್ತರಿಸುವ ಉದ್ದೇಶ ಸರ್ಕಾರದ ಮುಂದಿದೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಮೂಲಕ ಸ್ಥಳೀಯರಿಗೆ ಉದ್ಯೋಗ ಮತ್ತು ಆದಾಯ ಸೃಷ್ಟಿಸಲಾಗುವುದು. ಇದರಿಂದ ಉದ್ಯೋಗಕ್ಕಾಗಿ ಮಲೆನಾಡಿನಿಂದ ಜನರು ಹೊರಗೆ ವಲಸೆ ಹೋಗುವುದು ತಪ್ಪಲಿದೆ ಎಂದು ಹೇಳಿದರು.
ಅಡಿಕೆ ಬೆಳೆಗಾರರ ಸಮಸ್ಯೆಗೆ ಕೇಂದ್ರದ ಜತೆ ಚರ್ಚೆ
ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಂಸದ ಬಿ.ವೈ. ರಾಘವೇಂದ್ರ ಹಾಗೂ ಬಿಜೆಪಿ ನಾಯಕರನ್ನು ಒಳಗೊಂಡು ದೆಹಲಿಗೆ ತೆರಳಿ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲು ಸಿದ್ಧ. ಪಕ್ಷಭೇದ ಮರೆತು ಎಲ್ಲರೂ ಒಟ್ಟಾಗಿ ಮಲೆನಾಡಿನ ಸಮಸ್ಯೆ ಬಗೆಹರಿಸಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.
’ತೇಗ ಸಿರಿ’ ಯೋಜನೆ ಜಾರಿ: ರೈತರ ಆದಾಯ ಹೆಚ್ಚಿಸಲು ರಾಜ್ಯ ಸರ್ಕಾರ ‘ತೇಗ ಸಿರಿ’ ಯೋಜನೆ ಜಾರಿಗೆ ತರುತ್ತಿದೆ. ರಸ್ತೆಗಳ ಅಕ್ಕಪಕ್ಕ ಹಾಗೂ ಸರ್ಕಾರಿ ಜಾಗದಲ್ಲಿ ತೇಗದ ಸಸಿಗಳ ನೆಟ್ಟು ಅವುಗಳ ನಿರ್ವಹಣೆ ಜವಾಬ್ದಾರಿ ಸ್ಥಳೀಯರಿಗೆ ನೀಡಲಾಗುವುದು. 20 ವರ್ಷಗಳ ನಂತರ ಆ ಮರ ಕಡಿದಾಗ ಬರುವ ಆದಾಯದಲ್ಲಿ ಈ ಯೋಜನೆಯಡಿ ಶೇ 70ರಷ್ಟು ಆದಾಯ ಬೆಳೆಸಿದವರಿಗೆ ಹಾಗೂ ಶೇ 30ರಷ್ಟು ಸರ್ಕಾರಕ್ಕೆ ಕೊಡಲು ನಿಯಮ ರೂಪಿಸಲಾಗಿದೆ. ಯೋಜನೆಯಡಿ ಅರಣ್ಯ ಇಲಾಖೆಯಿಂದ ಉಚಿತವಾಗಿ ತೇಗದ ಸಸಿಗಳ ವಿತರಿಸಿ ಆಸಕ್ತರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.



