ಕಬ್ಬಿನಾಲೆ :ಭಾರತವು ಹತ್ತಾರು ಧಾರ್ಮಿಕ ಆಚರಣೆಗಳ ತವರೂರು. ನಮ್ಮ ದೇಶವು ಹಬ್ಬ, ಉತ್ಸವಗಳ ವೈವಿಧ್ಯಮಯ ಪರಂಪರೆಯನ್ನು ಹೊಂದಿರುವ ಸಾಂಸ್ಕೃತಿಕ ನಾಡು. ಆಧ್ಯಾತ್ಮಿಕ ಶಕ್ತಿಯ ಜಾಗೃತ ಪೀಠವಾದ ಭಾರತದಲ್ಲಿ ಜಾತಿ, ಮತ ಬೇಧವಿಲ್ಲದೆ ಎಲ್ಲರೂ ಐಕ್ಯತೆಯಿಂದ ಇದ್ದು ಸಾರ್ವಜನಿಕವಾಗಿ ಆಚರಿಸಲ್ಪಡುವ ಹಬ್ಬ ಅದು ಗಣೇಶನ ಹಬ್ಬ. ಲೋಕಮಾನ್ಯ ಬಾಲಗಂಗಾಧರ ತಿಲಕರು ದೇಶಪ್ರೇಮವನ್ನು ಬೆಳೆಸಲು, ಸ್ವಾತಂತ್ರ್ಯ ಹೋರಾಟದ ಶಕ್ತಿಯಾಗಿ ಜನರನ್ನು ಒಗ್ಗೂಡಿಸಲು ಶ್ರೀ ಮಹಾಗಣಪತಿಯ ಹಬ್ಬವನ್ನು ಆಚರಿಸುವ ಕರೆ ಕೊಟ್ಟರು. ಅವರ ಕಲ್ಪನೆಯಂತೆ ದೇಶಾದ್ಯಂತ ಗಣಪನ ಹಬ್ಬವನ್ನು ಆಚರಿಸಿಕೊಂಡು ಬರುವಂತಾಯಿತು.
ಹಬ್ಬಗಳು ನಮ್ಮ ನಂಬಿಕೆ, ಪರಂಪರೆಯನ್ನು ಗಟ್ಟಿಗೊಳಿಸುವ ಮೂಲಕ ಎಲ್ಲರನ್ನೂ ಐಕ್ಯಗೊಳ್ಳುವಂತೆ ಮಾಡುತ್ತದೆ. ವೈವಿಧ್ಯಮಯ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಒದಗಿಸುತ್ತದೆ. ಗಣೇಶನ ಉಪಾಸನೆಯ ಬಗ್ಗೆ ವೇದಗಳಲ್ಲಿ, ಪುರಾಣಗಳಲ್ಲಿ, ಉಪನಿಷತ್ತುಗಳಲ್ಲಿ ಅನೇಕ ಉಲ್ಲೇಖಗಳಿವೆ. ಪ್ರತಿನಿತ್ಯವೂ ಭಗವಂತನ ಚಿಂತನೆ ಮಾಡುತ್ತಾ, ನಮ್ಮ ಧರ್ಮ, ಸಂಸ್ಕೃತಿಯ ಬಗ್ಗೆ ವಿಶಾಲವಾದ ಧನಾತ್ಮಕ ಹಾಗೂ ಗೌರವದ ಭಾವನೆ ಇಟ್ಟುಕೊಂಡು ಸತ್ಯ, ನ್ಯಾಯ, ಧರ್ಮಮಾರ್ಗದಲ್ಲಿ ಮುನ್ನಡೆದಾಗ ನಮ್ಮೆಲ್ಲರ ಇಷ್ಟಾರ್ಥಗಳು ಈಡೇರುತ್ತದೆ.ಭಕ್ತಿ, ಶ್ರದ್ದಾಪೂರ್ವಕವಾಗಿ ನಡೆಸುವ ಶ್ರೀ ಮಹಾಗಣಪತಿಯ ಆರಾಧನೆಯಿಂದ ಸಕಲ ಕಾರ್ಯಗಳಲ್ಲೂ ಯಶಸ್ಸನ್ನು ಪಡೆಯಲು ಸಾಧ್ಯ ಎಂದು ಮುದ್ರಾಡಿ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಬಲ್ಲಾಡಿ ಚಂದ್ರಶೇಖರ ಭಟ್ ಹೇಳಿದರು.
ಅವರು ಕಬ್ಬಿನಾಲೆ ಕೆಳಮಠ ಶ್ರೀ ವೇಣುಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ನಡೆದ 40 ನೆ ವರ್ಷದ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಯೋಗೀಂದ್ರ ಹೆಬ್ಬಾರ್ ಅಧ್ಯಕ್ಷತೆ ವಹಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.
ಕಬ್ಬಿನಾಲೆ ಕೆಳಮಠ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅರ್ಚಕರಾದ ವೇದಮೂರ್ತಿ ನಾರಾಯಣ ಭಟ್ ಕಬ್ಬಿನಾಲೆ,ಸಮಿತಿಯ ಉಪಾಧ್ಯಕ್ಷರುಗಳಾದ ಸದಾಶಿವ ಶೆಟ್ಟಿ ಕೇಸರಿಬೈಲು ಹಾಗೂ ಅಚ್ಯುತ ಪೂಜಾರಿ ಪಾದೆಮನೆ, ಕಾರ್ಯದರ್ಶಿಗಳಾದ, ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಬ್ಬಿನಾಲೆಯ ನಿವೃತ್ತ ವೀರಯೋಧ ಆನಂದ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಯಮುನಾ, ಕಬ್ಬಿನಾಲೆ ಮೇಲ್ಮಠ ಅಂಗನವಾಡಿಯ ನಿವೃತ್ತ ಶಿಕ್ಷಕಿ ನಿರ್ಮಲಾ ಆರ್. ಹೆಬ್ಬಾರ್ ಅವರನ್ನು ಸನ್ಮಾನಿಸಲಾಯಿತು.
ಧಾರ್ಮಿಕ ಪ್ರವಚನಕಾರರಾದ ಬಲ್ಲಾಡಿ ಚಂದ್ರಶೇಖರ ಭಟ್ ಹಾಗೂ ಗಣೇಶೋತ್ಸವಕ್ಕೆ ಸಹಕರಿಸಿದ ಎಲ್ಲ ದಾನಿಗಳನ್ನು ಗೌರವಿಸಲಾಯಿತು.ಸಮಿತಿಯ ಗೌರವ ಸಲಹೆಗಾರರಾದ ಕಾಪೋಳಿ ಶ್ರೀಧರ ಹೆಬ್ಬಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಬ್ಬಿನಾಲೆ ಸುನೀತಾ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿ, ರಾಜ್ಯ ಸಂಪನ್ಮೂಲ ವ್ಯಕ್ತಿ ಸೀತಾರಾಮ ಹೆಬ್ಬಾರ್ ವಂದಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗರಾಜ ಶೆಟ್ಟಿಗಾರ್, ಜೊತೆ ಕಾರ್ಯದರ್ಶಿ ಸುನೀತಾ ಅಶೋಕ ಪೂಜಾರಿ, ಕೋಶಾಧಿಕಾರಿ ಪ್ರವೀಣ್, ಕಬ್ಬಿನಾಲೆ ಹಾಗೂ ಸಮಿತಿಯ ಸರ್ವ ಪದಾಧಿಕಾರಿಗಳು ಸಹಕರಿಸಿದರು



