ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚನೆಗೆ ನಿರ್ಧಾರ.
ಬೆಂಗಳೂರು : ಕಸ್ತೂರಿ ರಂಗನ್ ವರದಿಯ ಬಗ್ಗೆ ಕೇಂದ್ರ ಸರ್ಕಾರ ಹೊರಡಿಸಿರುವ 7ನೇ ಕರಡು ಅಧಿಸೂಚನೆಯನ್ನು ಯಥಾವತ್ತಾಗಿ ಒಪ್ಪದೇ ಇರಲು ತೀರ್ಮಾನಿಸಿದ್ದು, ಕೇಂದ್ರ ಸರ್ಕಾರವನ್ನು ಒತ್ತಾಯಿಸಿ 6 ಅಂಶಗಳ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಅತ್ಯಂತ ಪ್ರಮುಖವಾಗಿ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿ, ಕಸ್ತೂರಿ ರಂಗನ್ ವರದಿಯ ನ್ಯೂನತೆಗಳನ್ನು ಸರಿಪಡಿಸಿ ಸೂಕ್ತ ಮಾರ್ಪಾಡುಗಳನ್ನು ಸೂಚಿಸಲು ಕ್ರಮೈಗೊಳ್ಳುವುದು.
ಹಾಗೂ ಭೌತಿಕವಾಗಿ ಸರ್ವೆ ಕಾರ್ಯವನ್ಬು ನಡೆಸಿ ನಂಬರ್ವಾರು ಅಳತೆಯನ್ನು ರಾಜ್ಯ ಸರ್ಕಾರದಿಂದ ಮಾಡಲು ಮಹತ್ವದ ನಿರ್ಣಯವನ್ನು ಮಾಡಲಾಗಿದೆ.
ಪಶ್ಚಿಮ ಘಟ್ಟದ ಮೇಲಿನ ಆತಂಕದ ಕಸ್ತೂರಿ ರಂಗನ್ ವರದಿಯ ವಿಚಾರದಲ್ಲಿ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ನಮಗೆ ಪರಿಸರ ಉಳಿಯಬೇಕು. ಕಾಡಿದ್ದರೆ ನಾಡು, ಕಾಡಿದ್ದರೆ ಮಳೆ. ಹಾಗೆಂದು ರೈತರನ್ನೂ ಉಳಿಸಬೇಕು. ಕಾಡು ಉಳಿಯಬೇಕು. ಗ್ರಾಮಮಟ್ಟದಲ್ಲಿ ಪರಿಶೀಲನೆ ಮಾಡುವಂತೆ ಅಭಿಪ್ರಾಯ ವ್ಯಕ್ತವಾಗಿದೆ. ಅದಕ್ಕೆ ನಮ್ಮ ಒಪ್ಪಿಗೆ ಇದೆ. ಕೃಷಿ ಮತ್ತು ತೋಟಗಾರಿಕೆ ಈ ಮೊದಲಿನಂತೆಯೇ ನಡೆಯಬೇಕು. ರಸ್ತೆ, ಆಸ್ಪತ್ರೆಗಳು ಇವೆ. ಅವುಗಳ ರಕ್ಷಣೆ ನಮ್ಮದು ಹಾಗೂ ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದಿದ್ದಾರೆ.
ಹಿರಿಯ ವಕೀಲರ ನೇಮಕಕ್ಕೆ ತೀರ್ಮಾನ, ಕೇಂದ್ರಕ್ಕೆ ನಿಯೋಗ:
ಕಸ್ತೂರಿರಂಗನ್ ವರದಿಯಿಂದ ಉಡುಪಿ, ದಕ್ಷಿಣಕನ್ನಡ, ಉತ್ತರ ಕನ್ನಡ, ಮೈಸೂರು, ಬೆಳಗಾವಿ, ಚಿಕ್ಕಮಗಳೂರು, ಶಿವಮೊಗ್ಗ ಸೇರಿ 10 ಜಿಲ್ಲೆಗಳಲ್ಲಿ ಸಮಸ್ಯೆ ಆಗುತ್ತದೆ. ಸಾಮಾನ್ಯ ಜನರ ಹಿತ ಕಾಯಲು ನಮ್ಮ ಸರ್ಕಾರ ಬದ್ಧವಾಗಿದೆ.
ಕೇಂದ್ರ ಸರ್ಕಾರಕ್ಕೆ ತಕ್ಷಣ ಅರ್ಜಿ ಸಲ್ಲಿಸುವ ಅನಿವಾರ್ಯತೆ ಇದೆ. ಎಲ್ಲಾ ಸದಸ್ಯರ ಅಭಿಪ್ರಾಯವನ್ನು ಪಡೆಯಲಾಗಿದೆ.
ಕೇರಳ ಮಾದರಿ ಸಮೀಕ್ಷೆ : ಕಾನೂನು ಹೋರಾಟ.
ಕೇರಳ ಮಾದರಿ ವೈಜ್ಞಾನಿಕ ಸಮೀಕ್ಷೆ ಮಾಡಬೇಕು. ಕಾನೂನು ಹೋರಾಟ ಮಾಡಲು ತೀರ್ಮಾನ ಆಗಿದೆ. ಜನರ ಬದುಕಿಗೆ ನಾವು ತೊಂದರೆ ಕೊಡಬಾರದು. ಗ್ರಾಮ ಮಟ್ಟದಲ್ಲಿ, ಸರ್ವೆ ಸಂಖ್ಯೆವಾರು ಭೌತಿಕ ಸರ್ವೆ ಆಗಬೇಕು ಎಂಬುದು ಎಲ್ಲರ ಅಭಿಪ್ರಾಯ ಇದೆ. ಸುಪ್ರೀಂ ಕೋರ್ಟ್ ಗೆ ಹಿರಿಯ ವಕೀಲರನ್ನು ನೇಮಕ ಮಾಡಲೂ ತೀರ್ಮಾನಿಸಲಾಗಿದೆ. ಕೇಂದ್ರಕ್ಕೆ ನಿಯೋಗ ಕರೆದೊಯ್ಯೋಣ, ಕೇಂದ್ರ ಅರಣ್ಯ ಸಚಿವರು, ಪ್ರಧಾನಿಯನ್ನು ಭೇಟಿ ಮಾಡೋಣ. ಎಲ್ಲರೂ ಒಕ್ಕೊರಲಿನಿಂದ ಹೋರಾಟ ಮಾಡಬೇಕಾಗಿದೆ.
ನಮ್ಮ ಸಂಸದರು ಬಾಯಿಬಿಡಬೇಕು:
ನಮ್ಮ ಸಂಸದರು ಕಸ್ತೂರಿ ರಂಗನ್ ವರದಿಯ ಬಗ್ಗೆ ಬಾಯಿ ಬಿಡಬೇಕು. ರೈತರು ಉಳಿಯಬೇಕು. ಜನ ಸಾಮಾನ್ಯರು ಉಳಿಯಬೇಕು. ರಾಜಕಾರಣ ಮಾಡುವುದು ಬೇಡ ಮುಖ್ಯಮಂತ್ರಿ ಹೇಳಿದರು.
ಸದನದ ನಿರ್ಣಯ ಹೀಗಿದ:
ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಲ್ಲಿ ಕೇವಲ ಅಧಿಸೂಚಿತ ಅರಣ್ಯ ಪ್ರದೇಶಗಳು, ಇತರೆ ಅರಣ್ಯ ಪ್ರದೇಶಗಳು ಮಾತ್ರ ಸೇರಿಸಬೇಕು. ಕೃಷಿ ಭೂಮಿ, ತೋಟಗಾರಿಕೆ/ಪ್ಲಾಂಟೇಶನ್ ಪ್ರದೇಶಗಳು, ಜನವಸತಿ ಮತ್ತು ಸಾರ್ವಜನಿಕ ಚಟುವಟಿಕೆ ಪ್ರದೇಶಗಳನ್ನು ಸೇರಿಸಬಾರದು. ಬಗರ್ ಹುಕುಂ, ಅರಣ್ಯ ಹಕ್ಕು, ಡೀಮ್ಸ್ ಫಾರೆಸ್ಟ್, ಭೂ ಮಂಜೂರಾತಿ, ಮೇಲ್ಮನವಿ ಮತ್ತು ನ್ಯಾಯಾಂಗ ಪ್ರಕರಣಗಳನ್ನು ಪರಿಗಣಿಸಬೇಕು. ತಜ್ಞ ಸಮಿತಿಯಿಂದ ಭೌತಿಕವಾಗಿ ಅರಣ್ಯಗಡಿ, ಜನವಸತಿ, ಪರಿಸರ ಸೂಕ್ಷ್ಮ ಪ್ರದೇಶಗಳನ್ನು, ಜನವಸತಿ ಕೃಷಿ ಚಟುವಟಿಕೆ ಪ್ರದೇಶಗಳನ್ನು ಸರ್ವೆ ನಂಬರ್ವಾರು ಅಳತೆ ಮಾಡಿ ಪ್ರತ್ಯೇಕವಾಗಿ ಗುರುತಿಸಬೇಕು. ಪರಿಸರ ಸೂಕ್ಷ್ಮ ಪ್ರದೇಶದಿಂದಾಗಿ ರೈತರ ಹಾಗೂ ಕಾರ್ಮಿಕರ ಪರ್ಯಾಯ ಜೀವನೋಪಾಯ ಮತ್ತು ಆರ್ಥಿಕ ನೆರವನ್ನು ನೀಡಲು ಸೂಕ್ತ ಮಾರ್ಗಸೂಚಿ ರೂಪಿಸಲು ನಿರ್ಣಯಿಸಲಾಗಿದೆ.
ನಿವೃತ್ತ ನ್ಯಾಯಧೀಶರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಗೆ ನಿರ್ಣಯ: ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಸಮಿತಿಯಲ್ಲಿ ಕಂದಾಯ ಅಧಿಕಾರಿಗಳು, ಅರಣ್ಯಾಧಿಕಾರಿಗಳು, ರೈತ ಸಮುದಾಯದ ಪ್ರತಿನಿಧಿಗಳು, ಕೈಗಾರಿಕಾ ಉದ್ಯಮಗಳ ಪ್ರತಿನಿಧಿಗಳು, ಅರಣ್ಯ ಮತ್ತು ‘ಪರಿಸರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪರಿಣತಿ ಹೊಂದಿರುವ ಶೈಕ್ಷಣಿಕ ಸಂಸ್ಥೆಗಳ ತಜ್ಞರು/ವಿಜ್ಞಾನಿಗಳನ್ನೊಳಗೊಂಡ ಸಮಿತಿ ರಚಿಸಿ, ಕಸ್ತೂರಿ ರಂಗನ್ ವರದಿಯ ನ್ಯೂನತೆಗಳನ್ನು ಸರಿಪಡಿಸಿ ಸೂಕ್ತ ಮಾರ್ಪಾಡುಗಳನ್ನು ಸೂಚಿಸಲು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಜೊತೆಗೆ, ಭೌತಿಕವಾಗಿ ಸರ್ವೆ ನಂಬರ್ವಾರು ಅಳತೆ ರಾಜ್ಯ ಸರ್ಕಾರದಿಂದ ಮಾಡಲು ನಿರ್ಧರಿಸಿದ್ದು, ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಸಲುವಾಗಿ, ರಾಜ್ಯ ಸರ್ಕಾರವು ಭಾರತ ಸರ್ಕಾರವನ್ನು ಒಂದು ವರ್ಷದ ಕಾಲಾವಕಾಶ ನೀಡುವಂತೆ ಮನವಿ ಮಾಡಲು ನಿರ್ಣಯಿಸಲಾಗಿದೆ. ಈ ಅವಧಿಯವರೆಗೆ ಕೇಂದ್ರ ಸರ್ಕಾರ ಅಂತಿಮ ಅಧಿಸೂಚನೆಯನ್ನು ಅಂತಿಮಗೊಳಿಸಬಾರದು. ರಾಜ್ಯ ಸರ್ಕಾರ ತನ್ನ ವರದಿಯನ್ನು ಸಲ್ಲಿಸಿದ ನಂತರ, ಕೇಂದ್ರ ಸರ್ಕಾರ ರಾಜ್ಯ ಸರ್ಕಾರದೊಂದಿಗೆ ಈ ವಿಷಯದ ಕುರಿತು ವಿವರವಾದ ಚರ್ಚೆ ನಡೆಸಿ, ನಂತರವೇ ಈ ವಿಷಯದಲ್ಲಿ ಅಂತಿಮ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ರಾಜ್ಯ ಮಟ್ಟದ ಸಮಿತಿಗೆ ಸಹಾಯ ಮಾಡಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಜನಪ್ರತಿನಿಧಿಗಳನ್ನೊಳಗೊಂಡ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಗಿದೆ.
ನ್ಯೂನತೆ ಸರಿಪಡಿಸಲು ಆಗ್ರಹ:
ಎಲ್ಲಾ ಪಕ್ಷದ ಶಾಸಕರಭೌತಿಕವಾಗಿ ಸರ್ವೆ ನಂಬರ್ವಾರು ಅಳತೆಯನ್ನು ರಾಜ್ಯ ಸರ್ಕಾರದಿಂದ ಮಾಡಲು ನಿರ್ಣಯಿಸಲಾಗಿದೆ ಅಭಿಪ್ರಾಯಗಳನ್ನು ಕ್ರೋಢೀಕರಿಸಿ, ವಿಧಾನ ಸಭೆಯು ಸರ್ವಾನುಮತದಿಂದ 27ನೇ ಜುಲೈ 2026ರಂದು ಭಾರತ ಸರ್ಕಾರ ಹೊರಡಿಸಿದ 7ನೇ ಕರಡು ಪರಿಸರ ಸೂಕ್ಷ್ಮ ಪ್ರದೇಶ ಅಧಿಸೂಚನೆಯನ್ನು ಯಥಾವತ್ತಾಗಿ ಒಪ್ಪುವುದಿಲ್ಲ ಹಾಗೂ ನ್ಯೂನತೆಗಳನ್ನು ಸರಿಪಡಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಅರಣ್ಯ ಪ್ರದೇಶದ ಜೊತೆ ಕೃಷಿ ಜಮೀನು, ತೋಟಗಳು, ಮನೆಗಳು ಮತ್ತು ಸಾರ್ವಜನಿಕ ಸೌಲಭ್ಯಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಅಡಿಯಲ್ಲಿ ಸೇರಿಸಿರುವುದರಿಂದ, ಮನೆ ನಿರ್ಮಾಣ, ಕುಟುಂಬದ ಆಸ್ತಿ ವಿಭಜನೆ ಮತ್ತು ವಾರಸುದಾರಿಕೆಗೆ ಸಂಬಂಧಪಟ್ಟಂತೆ ಸಮಸ್ಯೆಗಳು ಉದ್ಭವವಾಗುತ್ತವೆ. ಕರಡು ಅಧಿಸೂಚನೆಯು ಉಪಗ್ರಹ ದತ್ತಾಂಶ ಆಧಾರಿತವಾಗಿದ್ದು, ನಿಖರ ಗಡಿ, ಸರ್ವೇ ನಂಬರ್ ಆಧಾರಿತವಾಗಿರುವುದಿಲ್ಲ. ಜನರಿಗೆ ಪರ್ಯಾಯ ಜೀವನೋಪಾಯಕ್ಕೆ ವಿಶೇಷ ಆರ್ಥಿಕ ನೆರವು ನೀಡಲು ಯಾವುದೇ ಪ್ರಸ್ತಾಪ ಇರುವುದಿಲ್ಲ. ಬಗರ್ ಹುಕುಂ, ಅರಣ್ಯ ಹಕ್ಕು, ಡೀಮ್ಸ್ ಫಾರೆಸ್ಟ್, ಭೂ ಮಂಜೂರಾತಿ, ಮೇಲ್ಮನವಿ ಮತ್ತು ನ್ಯಾಯಾಂಗ ಪ್ರಕರಣಗಳಂತಹ ವಿಷಯಗಳನ್ನು ಪರಿಗಣಿಸಿರುವುದಿಲ್ಲ. ಒಂದು ಗ್ರಾಮದ ಐದನೇ ಒಂದು ಭಾಗ ಅರಣ್ಯ ವ್ಯಾಪ್ತಿಯಲ್ಲಿ ಬರುತ್ತದೆ ಎಂಬ ಆಧಾರದ ಮೇಲೆ ಇಡೀ ಗ್ರಾಮವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವುದು ವೈಜ್ಞಾನಿಕ ಕ್ರಮವಲ್ಲ ಎಂದು ಮಹತ್ವದ ನಿರ್ಣಯದಲ್ಲಿ ತಿಳಿಸಲಾಗಿದೆ.



