ಅಪಾಯವನ್ನು ಆಹ್ವಾನಿಸುತ್ತಿದೆ.
ಹೆಬ್ರಿ : ಕಳೆದ ಕೆಲ ತಿಂಗಳ ಹಿಂದೆ ಆಗುಂಬೆ ಸೂರ್ಯಾಸ್ತಮಾನ ವೀಕ್ಷಣೆ ಸ್ಥಳ ಸಮೀಪ ಮುಖ್ಯರಸ್ತೆ ಕುಸಿತವಾಗಿದ್ದ ಸ್ಥಳದಲ್ಲಿಯೇ ೨ ದಿನಗಳ ಹಿಂದೆ ಮತ್ತೊಮ್ಮೆ ಮಣ್ಣು ಕುಸಿತವಾಗಿದೆ. ಕೆಲ ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಭಾರಿ ಗುಡ್ಡ ಕುಸಿತ ಸಂಭವಿಸಿ ಸುಮಾರು 3 ತಿಂಗಳು ಸಂಚಾರ ಬಂದ್ ಆಗಿತ್ತು. ಇದೀಗ ಅದೇ ಸ್ಥಳದಲ್ಲಿ ಮುಣ್ಣು ಕುಸಿತವಾಗಿದ್ದು ಮಳೆಯಾದರೆ ಮತ್ತಷ್ಟು ಕುಸಿತವಾಗುವ ಭೀತಿ ಎದುರಾಗಿದೆ.
ರಸ್ತೆ ಮಧ್ಯೆ ಬಿರುಕು : ಆಗುಂಬೆ ಘಾಟಿ ಮಲೆನಾಡು ಹಾಗೂ ಕರಾವಳಿಯನ್ನು ಸಂಪರ್ಕಿಸುವ ಸಂಚಾರದ ಪ್ರಮುಖ ಕೊಂಡಿಯಾಗಿದೆ. ಘಾಟಿಯಲ್ಲಿ ಒಟ್ಟು 14 ಕಡಿದಾದ ತಿರುವುಗಳಿದ್ದು, ಇವುಗಳಲ್ಲಿ ಮೇಲ್ಭಾಗದ 7 ತಿರುವುಗಳು ಶಿವಮೊಗ್ಗ ಜಿಲ್ಲೆಗೂ ಹಾಗೂ ಕೆಳಗಿನ 7 ತಿರುವುಗಳು ಉಡುಪಿ ಜಿಲ್ಲೆಗೂ ಸೇರಿವೆ. ಪ್ರಸ್ತುತ 5,7, 3,4 ತಿರುವು ಹಾಗೂ ಆನೆಕಲ್ಲು ರಸ್ತೆ ಮಧ್ಯಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ.
ಟ್ರಾಫಿಕ್ ಸಮಸ್ಯೆ :
ಸೂರ್ಯಾಸ್ತದ ಸಮಯವಾಗುತ್ತಿದ್ದಂತೆ ಆಗುಂಬೆಯತ್ತ ಪ್ರವಾಸಿಗರ ವಾಹನಗಳು ಹೆಚ್ಚಾಗುತ್ತದೆ. ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಸೂರ್ಯಾಸ್ತ ವೀಕ್ಷಿಸುವವರು, ಫೋಟೊ ತೆಗೆಯುವವರು, ಎದುರು ಬದುರಾಗಿ ಸಾಗುವ ವಾಹನಗಳು ಇವೆಲ್ಲವೂ ಸೇರಿ ಘಾಟಿಯ ಕಿರಿದಾದ ರಸ್ತೆಯಲ್ಲಿ ಸಂಚಾರದ ಒತ್ತಡ ಸೃಷ್ಟಿಸುತ್ತಿವೆ. ವೀಕೆಂಡ್ ದಿನಗಳಲ್ಲಿ ಈ ಒತ್ತಡ ಇನ್ನಷ್ಟು ಹೆಚ್ಚಾಗಿ ಕೆಲವೆಡೆ ಟ್ರಾಫಿಕ್ ಜಾಮ್ ಉಂಟಾಗುತ್ತಿರುವುದು ಸ್ಥಳೀಯರಿಗೆ ನಿತ್ಯದ ಸಮಸ್ಯೆಯಾಗಿದೆ. ವಾಹನ ಸವಾರರು ಅಪಾಯದ ಸ್ಥಳದಲ್ಲಿ ನಿಧಾನವಾಗಿ ಹಾಗೂ ಅತ್ಯಂತ ಎಚ್ಚರಿಕೆಯಿಂದ ಸಂಚರಿಸಬೇಕಾಗಿದೆ.
ಪ್ರವಾಸಿಗರೇ ಎಚ್ಚರ ! :
ಸೂರ್ಯಾಸ್ತದ ಸಮಯದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗುವುದರಿಂದ ಸಂಚಾರಕ್ಕೆ ಅಡ್ಡಿಯಾಗದಂತೆ ಸಹಕರಿಸಬೇಕಿದೆ. ಕುಸಿದಿರುವ ರಸ್ತೆ ಅಂಚಿನ ಬಳಿ ನಿಂತು ಫೋಟೊ ತೆಗೆಯುವುದು ಅಥವಾ ವಾಹನಗಳನ್ನು ನಿಲ್ಲಿಸುವುದನ್ನು ತಪ್ಪಿಸುವುದು ಸುರಕ್ಷಿತವಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.
₹18 ಕೋಟಿ ಅನುದಾನ :
ಆಗುಂಬೆ ಘಾಟಿ ರಸ್ತೆಯ ದುರಸ್ತಿಗಾಗಿ ಸುಮಾರು ₹18 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಘಾಟಿ ರಸ್ತೆಯ ದುಸ್ಥಿತಿಗೆ ಶಾಶ್ವತ ಪರಿಹಾರ ಕಲ್ಪಿಸಲು ಬಿಡುಗಡೆಯಾಗಿರುವ ಈ ಅನುದಾನದಲ್ಲಿ ಕಾಮಗಾರಿಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕಿದೆ. ರಸ್ತೆ ಕುಸಿತ, ಹೆಚ್ಚುತ್ತಿರುವ ಪ್ರವಾಸಿಗರ ವಾಹನ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು.
ಸಚಿವರ ಭೇಟಿ : ಜುಲೈ ತಿಂಗಳಿನಲ್ಲಿ ಆಗುಂಬೆ ಘಾಟಿ ಪ್ರದೇಶಕ್ಕೆ ಭೇಟಿ ನೀಡಿದ ರಾಜ್ಯದ ಲೋಕೋಪಯೋಗಿ ಸಚಿವ ಜಾರಕಿಹೊಳಿ ರಸ್ತೆಯ ಅಪಾಯಕಾರಿ ತಿರುವುಗಳ ದುರಸ್ತಿಗೆ ವಿಶೇಷ ಗಮನ ನೀಡಲಾಗುವುದು ಎಂದು ತಿಳಿಸಿದ್ದರು.
18 ಕೋಟಿ ಮಂಜೂರು:
ರಾಷ್ಟ್ರೀಯ ಹೆದ್ದಾರಿ ಸಾಗುವ ಅಗುಂಬೆ ಘಾಟಿ ರಸ್ತೆ ದುರಸ್ತಿಗೆ ರಸ್ತೆ ಅಭಿವೃದ್ದಿಗೆ 18 ಕೋಟಿ ಬಿಡುಗಡೆ ಮಾಡಲಾಗಿದೆ ಸದ್ಯದಲ್ಲೇ ಕಾಮಗಾರಿ ಅರಂಭವಾಗಲಿದೆ.
– ಕೋಟ ಶ್ರೀನಿವಾಸ ಪೂಜಾರಿ ಸಂಸದರು ಉಡುಪಿ ಚಿಕ್ಕಮಗಳೂರು ಕ್ಷೇತ್ರ.
ಶೀಘ್ರ ಕೆಲಸ :
ಅನುದಾನ ಮಂಜೂರು ಆಗಿದ್ದು, ಶೀಘ್ರದಲ್ಲಿ ಕೆಲಸ ಆರಂಭ ಮಾಡುತ್ತೇವೆ.
-ಶಶಿಧರ್, ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಇಲಾಖೆ



