ಹೆಬ್ರಿ : ಹೆಬ್ರಿಯ ಪಿ.ಆರ್.ಎನ್. ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಪಿಯುಸಿ ನಂತರದ ಶಿಕ್ಷಣ ಆಯ್ಕೆಯ ಗೊಂದಲವನ್ನು ನಿವಾರಿಸಿ, ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಸಾಮರ್ಥ್ಯ ಮತ್ತು ಭವಿಷ್ಯದ ಗುರಿಗೆ ಅನುಗುಣವಾಗಿ ಸರಿಯಾದ ಕೋರ್ಸ್ ಆಯ್ಕೆ ಮಾಡಲು ನೆರವಾಗಲು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಹಯೋಗದಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.
ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಮನೋರಂಜನಿ ಶೆಟ್ಟಿ ಅವರು ಮಾತನಾಡಿ, ಪಿಯುಸಿ ನಂತರ ಬಿ.ಕಾಂ, ಬಿ.ಬಿ.ಎ, ಸಿ.ಎ, ಸಿ.ಎಸ್, ಬ್ಯಾಂಕಿಂಗ್, ಫೈನಾನ್ಸ್, ಮ್ಯಾನೇಜ್ಮೆಂಟ್, ಲಾಜಿಸ್ಟಿಕ್ಸ್ ನಂತಹ ಸಾಂಪ್ರದಾಯಿಕ ಮತ್ತು ಆಧುನಿಕ ವೃತ್ತಿಪರ ಕೋರ್ಸ್‌ಗಳ ಬಗ್ಗೆ ವಿವರಿಸಿದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪದವಿ ಸಾಲದು, ಕೌಶಲ್ಯಾಧಾರಿತ ಶಿಕ್ಷಣ ಮತ್ತು ಹೊಸ ತಂತ್ರಜ್ಞಾನಗಳ ಅರಿವು ಅತ್ಯಗತ್ಯ ಎಂದು ತಿಳಿಸಿದರು.
ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ನಿಟ್ಟೆ ವಿಶ್ವವಿದ್ಯಾಲಯದ ಸಹಾಯಕ ನಿರ್ದೇಶಕ ವಿವೇಕ್ ರಂಜನ್ ಭಂಡಾರಿ ಅವರು ಮಾರ್ಗದರ್ಶನ ನೀಡಿದರು. ಎಂಜಿನಿಯರಿಂಗ್, ಎಂ.ಬಿ.ಬಿ.ಎಸ್, ಬಿ.ಡಿ.ಎಸ್, ನರ್ಸಿಂಗ್, ಫಾರ್ಮಸಿ, ಅಲೈಡ್ ಹೆಲ್ತ್ ಸೈನ್ಸ್, ಬಯೋಟೆಕ್ನಾಲಜಿ, ಸಂಶೋಧನಾ ಕ್ಷೇತ್ರಗಳು ಸೇರಿದಂತೆ ವಿಜ್ಞಾನ ವಿದ್ಯಾರ್ಥಿಗಳಿಗಿರುವ ಬಹುಮುಖಿ ಅವಕಾಶಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಕೇವಲ ಅಂಕಗಳಲ್ಲ, ಸಂವಹನ ಕೌಶಲ್ಯ, ಸೃಜನಶೀಲತೆ ಮತ್ತು ನಿರಂತರ ಕಲಿಕೆಯ ಮನೋಭಾವವೇ ಯಶಸ್ಸಿನ ಮಂತ್ರ ಎಂದು ತಿಳಿಸಿದರು.
ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಅನೇಕ ಗೊಂದಲಗಳನ್ನು ನಿವಾರಿಸಿಕೊಂಡರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಜೋಗಿ ಅವರು ಮಾತನಾಡಿ, “ಪಿಯುಸಿ ಹಂತವು ವಿದ್ಯಾರ್ಥಿ ಜೀವನದ ಅತ್ಯಂತ ನಿರ್ಣಾಯಕ ಘಟ್ಟ. ಈ ಹಂತದಲ್ಲಿ ತೆಗೆದುಕೊಳ್ಳುವ ಸರಿಯಾದ ನಿರ್ಧಾರವೇ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ. ಸರಿಯಾದ ಸಮಯದಲ್ಲಿ ಸಿಗುವ ಸರಿಯಾದ ಮಾರ್ಗದರ್ಶನವು ವಿದ್ಯಾರ್ಥಿಯ ಬದುಕಿಗೆ ಹೊಸ ದಿಕ್ಕನ್ನು ನೀಡುತ್ತದೆ” ಎಂದರು.
ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥರು, ಎಲ್ಲಾ ವಿಭಾಗಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಖ್ಯಾಶಾಸ್ತ್ರ ಉಪನ್ಯಾಸಕ ಚಂದ್ರಹಾಸ್ ನಿರೂಪಿಸಿ ಸ್ವಾಗತಿಸಿ ವಂದಿಸಿದರು.



