ಹೆಬ್ರಿ : ಅಲಯನ್ಸ್ ಕ್ಲಬ್ ಹೆಬ್ರಿ ವತಿಯಿಂದ, ಚಾರ ಗ್ರಾಮದ ಹಿರಿಯ ನಾಗರಿಕ, ಸಮಾಜ ಸೇವಕ, ಪ್ರಗತಿಪರ ಕೃಷಿಕರಾದ ಎಚ್.ನಾಗಯ್ಯ ಶೆಟ್ಟಿಯವರನ್ನು ಹಿರಿಯರ ದಿನದ ಪ್ರಯುಕ್ತ ಅವರ ಸ್ವಗೃಹದಲ್ಲಿ ಶುಕ್ರವಾರ ಸನ್ಮಾನಿಸಲಾಯಿತು.
ನಾಗಯ್ಯ ಶೆಟ್ಟಿ ಅವರು ನವದೆಹಲಿಯ ನ್ಯಾಶನಲ್ ಕೌನ್ಸಿಲ್ ಫಾರ್ ಇಂಟಿಗ್ರೇಶನ್ ಮತ್ತು ಎಕೋನಮಿ ಪ್ರತಿಷ್ಠಿತ ರಾಷ್ಟ್ರೀಯ ರತ್ನ ಪ್ರಶಸ್ತಿ ಪುರಸ್ಕೃತರು. ತೆರೆಯ ಮರೆಯಲ್ಲಿದ್ದುಕೊಂಡು ನಿರಂತರವಾಗಿ ಜನರ ಸಂಪರ್ಕದಲ್ಲಿದ್ದು ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೆ ಜನಸೇವೆ ಮಾಡುತ್ತ ಹೆಬ್ರಿ ಪರಿಸರದಲ್ಲಿ ನಾಗಯಣ್ಣನೆಂದೇ ಖ್ಯಾತರಾಗಿದ್ದಾರೆ.
ಜನಪ್ರತಿನಿಧಿಯಾಗದೆಯೇ ನಿರಂತರ ಜನರ ಮಧ್ಯೆ ಇರುವ ನಾಗಯ್ಯ ಶೆಟ್ಟಿಯವರು ಹೆಬ್ರಿಯ ಚಾರದಲ್ಲಿ ಹೈನುಗಾರಿಕೆಯ ಜೊತೆಗೆ ಪ್ರಗತಿಪರ ಕೃಷಿಕರಾಗಿದ್ದಾರೆ. ಊರಿನಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮ ಕ್ಕೆ ನಿಸ್ವಾರ್ಥವಾಗಿ ಸಹಕಾರ ನೀಡುವವರು.
ಸರ್ಕಾರದ ಸವಲತ್ತುಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೂಲಕ ಬಡಜನರಿಗೆ ತಲುಪಿಸಲು ಪ್ರಾಮಾಣಿಕವಾಗಿ ಉಚಿತವಾಗಿ ಸೇವೆಯನ್ನು ಮಾಡುತ್ತ ಬಂದಿದ್ದಾರೆ.
ಕಾರ್ಯಕ್ರಮದಲ್ಲಿ ಹೆಬ್ರಿ ಅಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಚಂದ್ರ ಎಂ., ಉಪಾಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ ಮುದ್ರಾಡಿ, ಜಿಲ್ಲಾ ಕ್ಯಾಬಿನೆಟ್ ಸೆಕ್ರೆಟರಿ ರಾಮಚಂದ್ರ ಭಟ್, ರಮ್ಯಾಕಾಂತಿ, ರತ್ನಾವತಿ ನಾಯಕ್, ಉದ್ಯಮಿ ದಯಾನಂದ ಶೆಟ್ಟಿ ಮನೆಯವರು, ಮೊದಲಾದವರು ಉಪಸ್ಥಿತರಿದ್ದರು.




