ಹೆಬ್ರಿ : ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದ 15 ದಿನಗಳ ಉನ್ನತಿ ತರಬೇತಿ ಕಾರ್ಯಕ್ರಮ ಶುಕ್ರವಾರ ಸಂಪನ್ನಗೊಂಡಿತು.
ತರಬೇತಿಗೆ ಹಾಜರಾದ ವಿದ್ಯಾರ್ಥಿಗಳು ತಮ್ಮ ಅನುಭವ, ಅಭಿಪ್ರಾಯಗಳನ್ನು ಹಂಚಿಕೊಂಡು ವೇದಿಕೆಯಲ್ಲಿ ಮಾತನಾಡುವ ಆತ್ಮವಿಶ್ವಾಸ ಹೆಚ್ಚಾಗಿದೆ, ಇಂಗ್ಲಿಷ್ ಭಾಷಾ ಕೌಶಲ್ಯ ಸುಧಾರಿಸಿದೆ, ತಂಡವಾಗಿ ಕೆಲಸ ಮಾಡುವ ಮನೋಭಾವ ಬೆಳೆದಿದೆ ಹಾಗೂ ಸಮಯ ನಿರ್ವಹಣೆ ಮತ್ತು ಒತ್ತಡ ನಿರ್ವಹಣೆಯ ಕೌಶಲ್ಯಗಳನ್ನು ಕಲಿತಿದ್ದೇವೆ, ತರಬೇತಿಯು ತಮ್ಮ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಡಾ. ವಿದ್ಯಾಧರ ಹೆಗ್ಡೆ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಉತ್ತಮಗೊಳಿಸುವಲ್ಲಿ ತರಬೇತುದಾರ ಗುರುಪ್ರಸಾದ್ ಭಟ್ ಕೊಡುಗೆಯನ್ನು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು.
ತರಬೇತಿಯಲ್ಲಿ ಕಲಿತ ಕೌಶಲ್ಯಗಳನ್ನು ಕೇವಲ ತರಗತಿಯ ಪಾಠಗಳೆಂದು ಪರಿಗಣಿಸದೆ, ದೈನಂದಿನ ಜೀವನದಲ್ಲಿ ಸಕ್ರಿಯವಾಗಿ ಅಳವಡಿಸಿಕೊಂಡು ವೈಯಕ್ತಿಕ ಹಾಗೂ ವೃತ್ತಿಪರ ಬೆಳವಣಿಗೆಗೆ ಬಳಸಿಕೊಳ್ಳಬೇಕು.
ತರಬೇತಿಯಿಂದ ಪಡೆದ ಕೌಶಲ್ಯಗಳನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ದೀರ್ಘಕಾಲೀನ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಉನ್ನತಿ ತರಬೇತಿಯ ತರಬೇತುದಾರ ಗುರುಪ್ರಸಾದ್ ಭಟ್ ಅವರನ್ನು ಸನ್ಮಾನಿಸಿ ಗೌರವಿಸಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ಕೌಶಲ್ಯಾಭಿವೃದ್ಧಿಗೆ ಅವರು ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸಿ ಅಭಿನಂದಿಸಲಾಯಿತು.
ತರಬೇತುದಾರ ಗುರುಪ್ರಸಾದ್ ಭಟ್ ಅವರು ತರಬೇತಿಯುದ್ದಕ್ಕೂ ವಿದ್ಯಾರ್ಥಿಗಳು ತೋರಿದ ಸಕ್ರಿಯ ಭಾಗವಹಿಸುವಿಕೆ, ಆಸಕ್ತಿ ಮತ್ತು ಸಹಕಾರವನ್ನು ಮೆಚ್ಚಿ ಅಭಿನಂದಿಸಿದರು. ತರಬೇತಿಯ ಉದ್ದೇಶವನ್ನು ವಿದ್ಯಾರ್ಥಿಗಳು ಸಮರ್ಥವಾಗಿ ಅರ್ಥೈಸಿಕೊಂಡು ತಮ್ಮ ವ್ಯಕ್ತಿತ್ವದಲ್ಲಿ ಉತ್ತಮ ಬದಲಾವಣೆಗಳನ್ನು ತರಲು ಪ್ರಯತ್ನಿಸಿರುವುದು ಸಂತೋಷದ ವಿಷಯವಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಐಕ್ಯೂಎಸಿ ಸಂಯೋಜಕ ಡಾ. ಗಣೇಶ ಎಸ್., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸುಷ್ಮಾ ರಾವ್, ಪ್ಲೇಸ್‌ಮೆಂಟ್ ಸೆಲ್ ಸಂಯೋಜಕ ಡಾ. ಮಾವಿ ಮಿರಾಂಡಾ ಹಾಗೂ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರವೀಣ್ ಶೆಟ್ಟಿ ಅವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ವರ್ಷಿತಾ ಶೆಟ್ಟಿ ನಿರೂಪಿಸಿದರು. ಸಂಕೇತ್ ಶೆಟ್ಟಿ ಸ್ವಾಗತಿಸಿದರು. ಶ್ರತಿ ವಂದಿಸಿದರು.




