Sunday, August 9, 2026
HomeUncategorizedಆಗುಂಬೆ ಘಾಟ್ ರಸ್ತೆ ಅಭಿವೃದ್ಧಿ ಕುರಿತು ಪರಿಶೀಲನೆ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ

ಆಗುಂಬೆ ಘಾಟ್ ರಸ್ತೆ ಅಭಿವೃದ್ಧಿ ಕುರಿತು ಪರಿಶೀಲನೆ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ

ಆಗುಂಬೆ/ಶಿವಮೊಗ್ಗ: ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಮಂಗಳವಾರ ಆಗುಂಬೆ ಘಾಟ್‌ಗೆ ಭೇಟಿ ನೀಡಿ, ರಸ್ತೆ ಅಭಿವೃದ್ಧಿ ಹಾಗೂ ಘಾಟ್‌ನ ಪ್ರಸ್ತುತ ಸ್ಥಿತಿಗತಿಯ ಕುರಿತು ಸ್ಥಳ ಪರಿಶೀಲನೆ ನಡೆಸಿದರು.
ಆಗುಂಬೆ ಸೂರ್ಯಾಸ್ತ ವೀಕ್ಷಣಾ ಸ್ಥಳದಿಂದ ಸಂಪೂರ್ಣ ಘಾಟ್ ಪ್ರದೇಶವನ್ನು ವೀಕ್ಷಿಸಿದ ಸಚಿವರು, ರಸ್ತೆಯ ಸ್ಥಿತಿ, ಭೂಕುಸಿತ ಸಂಭವಿಸುವ ಪ್ರದೇಶಗಳು ಹಾಗೂ ಅಭಿವೃದ್ಧಿಗೆ ಇರುವ ತಾಂತ್ರಿಕ ಸವಾಲುಗಳ ಕುರಿತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಆಗುಂಬೆ ಘಾಟ್‌ನಲ್ಲಿ ಸುರಂಗ (ಟನಲ್) ನಿರ್ಮಾಣ ಹಾಗೂ ರಸ್ತೆ ದ್ವಿಪಥ (ಡಬಲ್ ರಸ್ತೆ) ಮಾಡುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಟನಲ್ ನಿರ್ಮಾಣದ ಬಗ್ಗೆ ಸರ್ಕಾರ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ರಸ್ತೆ ವಿಸ್ತರಣೆಗೆ ಅರಣ್ಯ ಹಾಗೂ ವನ್ಯಜೀವಿ ಇಲಾಖೆಗಳ ಅನುಮತಿ ಅಗತ್ಯವಿದ್ದು, ಹಲವು ತಾಂತ್ರಿಕ ಮತ್ತು ಪರಿಸರ ಸಂಬಂಧಿತ ಅಂಶಗಳನ್ನು ಪರಿಶೀಲಿಸಬೇಕಿದೆ. ಎಲ್ಲ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು,” ಎಂದು ಹೇಳಿದರು.
ಕೇಂದ್ರ ಸರ್ಕಾರ ಆಗುಂಬೆ ಘಾಟ್ ಸುರಂಗ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ಟೆಂಡರ್ ಆಹ್ವಾನಿಸಲಾಗಿದೆ. ಆದರೆ ಇದುವರೆಗೆ ಯಾರೂ ಟೆಂಡರ್ ಸಲ್ಲಿಸಿಲ್ಲ. ಯೋಜನೆಯ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಸೇರಿದಂತೆ ಹಲವು ವಿಷಯಗಳ ಬಗ್ಗೆ ಇನ್ನೂ ಸ್ಪಷ್ಟತೆ ಅಗತ್ಯವಿದೆ,” ಎಂದು ತಿಳಿಸಿದರು.
ಆಗುಂಬೆ ಘಾಟ್ ಅಭಿವೃದ್ಧಿ ಕುರಿತು ಮೊದಲು ಹೆಬ್ರಿ, ಕಾರ್ಕಳ ಹಾಗೂ ಸಂಬಂಧಿತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಗ್ರ ಮಾಹಿತಿ ಪಡೆಯಲಾಗುವುದು. ಬಳಿಕ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಮುಂದಿನ ಕ್ರಮಗಳ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಘಾಟ್ ರಸ್ತೆ ಅಭಿವೃದ್ಧಿ ಕೈಗೊಳ್ಳುವ ವೇಳೆ ಪರಿಸರ ಸಂರಕ್ಷಣೆಗೂ ಆದ್ಯತೆ ನೀಡಲಾಗುವುದು. ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಕಾಯ್ದುಕೊಂಡು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಕಲೇಶಪುರ ಘಾಟ್‌ನಲ್ಲಿ ಕಳೆದ ಮೂರು ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದ ಸಚಿವರು, ಚಾರ್ಮಾಡಿ ಘಾಟ್ ರಸ್ತೆ ದುರಸ್ತಿ ಕಾಮಗಾರಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments