ಮುದ್ರಾಡಿ : ಹದಿಹರೆಯದ ಕಾಲಘಟ್ಟದಲ್ಲಿ ವಿವಿಧ ಬದಲಾವಣೆಗಳು ಆಗುವುದು ಸಹಜ. ಅದನ್ನು ಅರಿತುಕೊಂಡು ಅಗತ್ಯವಿದ್ದಾಗ ವೈದ್ಯರ ಸಲಹೆಯನ್ನು ಪಡೆದುಕೊಂಡು ಆರೋಗ್ಯಕರ ಜೀವನ ಶೈಲಿಯನ್ನು ರೂಪಿಸಿಕೊಳ್ಳಬೇಕು. ತಂಬಾಕು ಉತ್ಪನ್ನಗಳು ನಮಗೆ ಅನೇಕ ರೀತಿಯಲ್ಲಿ ಹಾನಿಯನ್ನು ಉಂಟುಮಾಡುತ್ತದೆ. ತಂಬಾಕು ಸೇವನೆಯಿಂದ ದೂರವಿರಿ. ಯಾವುದೇ ರೀತಿಯ ಕಾಯಿಲೆಗಳು ಬರುವ ಮೊದಲೇ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಿ. ಎಚ್ ವಿಪಿ ಲಸಿಕೆಯನ್ನು ತೆಗೆದುಕೊಳ್ಳುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಕೆಲವೊಂದು ತಪ್ಪು ಮಾಹಿತಿಗೆ ಕಿವಿಗೊಡದೆ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಉಪ ಆರೋಗ್ಯ ಕೇಂದ್ರಗಳಲ್ಲಿ ನೀಡುವ ಸಲಹೆಯನ್ನು ಪಡೆದುಕೊಂಡು ಲಸಿಕೆಯನ್ನು ಸ್ವೀಕರಿಸಿ ಸರಕಾರ ನೀಡುವ ಪ್ರಯೋಜನಗಳನ್ನು ಪಡೆದುಕೊಳ್ಳಿ ಎಂದು ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ವೈಧ್ಯೆ ಡಾ. ಅರ್ಪಿತಾ ಶೆಟ್ಟಿ ಹೇಳಿದರು.
ಅವರು ಮುದ್ರಾಡಿ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಶಾಲೆಯ ಆರೋಗ್ಯ ಸಂಘದ ವತಿಯಿಂದ ನಡೆದ ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮಾಹಿತಿ ನೀಡಿದರು.
ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಯಶೋದಾ, ರಕ್ಷಕ ಶಿಕ್ಷಕ ಸಮಿತಿ ಅಧ್ಯಕ್ಷೆ ಪ್ರತಿಮಾ ದೇವಾಡಿಗ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಉಷಾ ಹೆಗ್ಡೆ, ಸಮುದಾಯ ಆರೋಗ್ಯ ಅಧಿಕಾರಿ ಅನುಷಾ, ಆಶಾ ಕಾರ್ಯಕರ್ತೆ ಅನಿತಾ, ಪೋಷಕರು,ಶಿಕ್ಷಕ ವೃಂದದವರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಶಿಕ್ಷಕಿ ಶ್ಯಾಮಲಾ ಕಾರ್ಯಕ್ರಮ ನಿರೂಪಿಸಿ, ಗೌರವ ಶಿಕ್ಷಕಿ ಅನುಷಾ ವಂದಿಸಿದರು.


