ಮುದ್ರಾಡಿ : ಮಹಿಮಾನ್ವಿತ ಯೋಗೀಂದ್ರ ಮಂತ್ರಾಲಯ ಪುರವಾಸ ಶ್ರೀ ರಾಘವೇಂದ್ರ ಗುರು ಸ್ವಾಮಿಗಳ ಜೀವನ ಚರಿತ್ರೆಯನ್ನು ಸಾರುವ ಶ್ರೀ ರಾಘವೇಂದ್ರ ಚರಿತೆ ಎನ್ನುವ ಯಕ್ಷಗಾನ ಪ್ರಸಂಗವನ್ನು ಗುರುವಾರ ಹೆಬ್ರಿಯ ಮುದ್ರಾಡಿ ಆದಿಶಕ್ತಿ ದೇವಸ್ಥಾನದ ರಾಘವೇಂದ್ರ ಸ್ವಾಮಿ ಗುರುಗಳ ಮೂರ್ತಿಯ ಎದುರು ವಿಜಯಕೀರ್ತಿ ಸುಕುಮಾರ ಮೋಹನ್ ಸ್ವಾಮೀಜಿಯವರು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಸುಕುಮಾರ್ ಮೋಹನ್ ಸ್ವಾಮೀಜಿ ಪ್ರಸಂಗವು ತಾಳಮದ್ದಲೆ ಮತ್ತು ಯಕ್ಷಗಾನದ ಮೂಲಕ ಉತ್ತಮ ಪ್ರದರ್ಶನ ಕಾಣಲಿ ಎಂದು ಶುಭ ಹಾರೈಸಿದರು.
ಬಡಗಿನ ಖ್ಯಾತ ಪ್ರಸಂಗಕರ್ತ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಿ. ವಿ. ಆನಂದ ಸಾಲಿಗ್ರಾಮ ಅವರು ತಮ್ಮ 72ನೆಯ ಪ್ರಸಂಗವಾಗಿ ಈ ಕೃತಿಯನ್ನು ರಚನೆ ಮಾಡಿದ್ದು, ಮೊದಲಿಗೆ ತಾಳಮದ್ದಳೆಯಲ್ಲಿ ಪ್ರಯೋಗ ಮಾಡಲು ಉದ್ದೇಶಿಸಿದ್ದಾರೆ.
ಪ್ರಸಂಗ ಬಿಡುಗಡೆ ಕಾರ್ಯಕ್ರಮದಲ್ಲಿ ಬೈಲೂರು ದಾಸ ದೇವಾಡಿಗ, ಸದಾನಂದ ಪೂಜಾರಿ, ಉಮೇಶ್ ಕಲ್ಮಾಡಿ, ಸುಗಂಧಿ ಉಮೇಶ್, ಶಾರದಾ ಟೀಚರ್, ವಾಣಿ ಸುಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ವಿವಿಧೆಡೆಗಳಲ್ಲಿ ನಡೆಯುವ ತಾಳಮದ್ದಳೆಯಲ್ಲಿ ಸತೀಶ್ ಬೇಳಂಜೆ, ಸುರೇಶ್ ಮರಕಾಲ, ಶಿವಸುಬ್ರಹ್ಮಣ್ಯ ಭಟ್, ಗಣೇಶ್ ಜಾಲ್ಸೂರು ಮುಂತಾದವರು ಅರ್ಥಧಾರಿಗಳಾಗಿ ಪಾಲ್ಗೊಳ್ಳಲಿದ್ದಾರೆ.



