ಕಬ್ಬಿನಾಲೆ : ತೋಟಗಾರಿಕೆ ಇಲಾಖೆ ಕಾರ್ಕಳ ಇದರ ವತಿಯಿಂದ ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಸಹಯೋಗದಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಸೌಲಭ್ಯ, ಯೋಜನೆಗಳ ಮಾಹಿತಿ ಕಾರ್ಯಾಗಾರ ಹಾಗೂ ಧರ್ತಿ ಆಭಾ ಯೋಜನೆಯಡಿ ಅರ್ಹ ಫಲಾನುಭವಿಗಳ ಅರ್ಜಿ ಸಂಗ್ರಹ ಕಾರ್ಯಕ್ರಮ ಮಂಗಳವಾರ ಕಬ್ಬಿನಾಲೆ ಮಲೆಕುಡಿಯ ಸಮುದಾಯ ಭವನದಲ್ಲಿ ಜರಗಿತು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀನಿವಾಸ್ ಬಿವಿ ಮಾಹಿತಿ ನೀಡಿ, ಧರ್ತಿ ಆಭಾ ಯೋಜನೆಯಡಿ ಅರಣ್ಯ ಹಕ್ಕುಪತ್ರ ರೈತರ ಅರ್ಜಿಗಳನ್ನು ಸಂಗ್ರಹಿಸಿದರು.
ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಮಾತನಾಡಿ, ಸರ್ಕಾರದ ಎಲ್ಲಾ ಇಲಾಖೆಯಲ್ಲಿರುವ ಸೌಲಭ್ಯಗಳು ಹಾಗೂ ಯೋಜನೆಗಳನ್ನು ಅರ್ಹರಿಗೆ ತಲುಪಿಸುವಲ್ಲಿ ಸಂಘಟನೆಯು ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದೆ ಎಂದರು.
ಕಬ್ಬಿನಾಲೆ ಮಲೆಕುಡಿಯ ಸಂಘದ ಅಧ್ಯಕ್ಷ ರಾಜು ಗೌಡ, ಎನ್ ಆರ್ ಎಲ್ ಎಂ ನ ಸುಮಲತಾ, ಕೃಷಿ ಸಖಿ ಸುಮಿತ್ರ, ಆಶಾ ಕಾರ್ಯಕರ್ತೆ ರತ್ನ ಉಪಸ್ಥಿತರಿದ್ದರು.
ಜಿಲ್ಲಾ ಸಹ ಸಂಘಟನಾ ಕಾರ್ಯದರ್ಶಿ ಶಶಿಧರ ಕೊರ್ತಬೈಲು ನಿರೂಪಿಸಿ, ಕಬ್ಬಿನಾಲೆ ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ಮನೋಹರ ಪುಂಡಾಲು ವಂದಿಸಿದರು.



