ಕುಕ್ಕೆಹಳ್ಳಿ : ನೂತನವಾಗಿ ಈ ಸಾಲಿನಲ್ಲಿ ಯಕ್ಷ ತಿರುಗಾಟಕ್ಕೆ ಸಜ್ಜಾಗಿರುವ ಕುಕ್ಕೆಹಳ್ಳಿ ಆದಿಮಾಯೇ ಶ್ರೀ ಮೂಕಾಂಬಿಕಾ ಕೊರಗಜ್ಜ ಕೃಪಾಪೋಷಿತ ಯಕ್ಷಗಾನ ಮೇಳಕ್ಕೆ ಆದಿಮಾಯೇ ಶ್ರೀ ಮೂಕಾಂಬಿಕಾ ಕೊರಗಜ್ಜ ಗುಳಿಗ ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ಸಮರ್ಪಿಸಲಾಯಿತು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಡಗಿನ ಪ್ರಸಂಗಕರ್ತ ಪಿ. ವಿ. ಆನಂದ ಸಾಲಿಗ್ರಾಮ ಅವರು ಈ ಹಿಂದೆಯೇ ಶ್ರೀ ಕ್ಷೇತ್ರದಿಂದ ತಮ್ಮ 70ನೆಯ ಪ್ರಸಂಗವಾಗಿ ರಚನೆ ಮಾಡಲು ವೀಳ್ಯವನ್ನು ಪಡೆದಿದ್ದು, ಆಗಸ್ಟ್ 25ರಂದು ಪ್ರಸಂಗದ ಪ್ರತಿಯನ್ನು ಕ್ಷೇತ್ರದ ಮೊಕ್ತೇಸರರಾದ ಮೇಳದ ಯಜಮಾನ ಡಾ. ಕೃಷ್ಣ ಕುಲಾಲ್ ಅವರಿಗೆ ಸಮರ್ಪಿಸಿದರು.
ಪ್ರಸಂಗದ ಪ್ರತಿ ಸ್ವೀಕರಿಸಿ ಕೃಷ್ಣ ಕುಲಾಲ್ ಅವರು, ಕ್ಷೇತ್ರ ಮಹಾತ್ಮೆ ಜೊತೆಗೆ ಪಿ ವಿ ಆನಂದ್ ಸಾಲಿಗ್ರಾಮ ರಚಿಸಿದ ಅಜ್ಜನ ಕರಿಗಂಧ ಮತ್ತು ಪವಿತ್ರ ಹೃದಯ ಎಂಬ ಪ್ರಸಂಗಗಳೂ ಕೂಡ ಈ ಬಾರಿ ಮೇಳದಲ್ಲಿ ಪ್ರದರ್ಶನ ಕಾಣಲಿವೆ. ಎಲ್ಲವೂ ಉತ್ತಮ ಪ್ರದರ್ಶನ ಕಾಣುವಂತೆ ಆಗುವಂತೆ ಶ್ರೀ ಕೊರಗಜ್ಜ ದೇವರು ಹರಸಲಿ ಎಂದು ಹಾರೈಸಿದರು.



