ಹರೀಶ್ ಶೆಟ್ಟಿಯವರನ್ನು ಗೌರವಿಸಿದ ಟೀಂ ಶ್ರೀಕಲ್ಕಿ ಪೆರ್ಡೂರು ತಂಡ.
ಪಡುಕುಡೂರು : ಟೀಂ ಶ್ರೀಕಲ್ಕಿ ಪೆರ್ಡೂರು ವತಿಯಿಂದ ಶ್ರೀ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಶನಿವಾರ ಪಡುಕುಡೂರು ಪಡುಪರ್ಕಳ ಮೀನಾಕ್ಷಿಯಲ್ಲಿ ಭರ್ಜರಿ ಹುಲಿವೇಷ ಕುಣಿತ ನಡೆಯಿತು.
50 ಕ್ಕೂ ಹೆಚ್ಚು ವಾಹನಗಳ ಮೂಲಕ ಜಾಥಾ ಮೂಲಕ ಪಡುಪರ್ಕಳಕ್ಕೆ ಆಗಮಿಸಿದ ಟೀಂ ಶ್ರೀಕಲ್ಕಿ ಪೆರ್ಡೂರು ತಂಡ ಸುಮಾರು 1 ಗಂಟೆಗೂ ಹೆಚ್ಚು ಕಾಲ ವಿವಿಧ ಕುಣಿತವನ್ನು ಪ್ರದರ್ಶಿಸಿತು. 1 ಹರಕೆಯ ಹುಲಿವೇಷ ಸೇರಿ 31 ಮಂದಿ ಮಕ್ಕಳು, ಯುವಕರು, ಯುವತಿಯರು ಹುಲಿವೇಷ ಕುಣಿತ ಪ್ರದರ್ಶನ ನೀಡಿದರು. 85 ಕ್ಕೂ ಹೆಚ್ಚು ಟೀಂ ಶ್ರೀಕಲ್ಕಿ ಪೆರ್ಡೂರು ತಂಡದ ಸದಸ್ಯರು ತಂಡದಲ್ಲಿದ್ದರು. “ಮೀನಾಕ್ಷಿ ಪಡುಪರ್ಕಳ ಕುಟುಂಬಸ್ಥರು, ಗಣ್ಯರು,ಊರಿನ ಪ್ರಮುಖರು ಸೇರಿ ಪಡುಕುಡೂರು ಪರಿಸರದ ನೂರಾರು ಮಂದಿ ಹುಲಿ ಕುಣಿತವನ್ನು ಕಣ್ತುಂಬಿಕೊಂಡರು. ಅನಾರೋಗ್ಯದಿಂದ ಗುಣಮುಖರಾಗುತ್ತಿರುವ ಪಡುಕುಡೂರು ಶ್ರೀಧರ ಆಚಾರ್ ಕುಣಿತ ವೀಕ್ಷಿಸಲು ಆಗಮಿಸಿದ್ದು ಎಲ್ಲರ ಗಮನ ಸೆಳೆಯಿತು. ಯುವ ಉದ್ಯಮಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಪಡುಕುಡೂರು ಪಡುಪರ್ಕಳ ಹರೀಶ ಶೆಟ್ಟಿ ಮುಂಬಯಿ ಅವರನ್ನು ಟೀಂ ಶ್ರೀಕಲ್ಕಿ ಪೆರ್ಡೂರು ತಂಡ ಗೌರವಿಸಿತು. ಹರೀಶ್ ಶೆಟ್ಟಿಯವರು ಟೀಂ ಶ್ರೀಕಲ್ಕಿ ಪೆರ್ಡೂರು ತಂಡಕ್ಕೆ ವಿಶೇಷ ಗೌರವ ನೀಡಿದರು.
ಮುಂದಿನ ವರ್ಷ ಟೀಂ ಶ್ರೀಕಲ್ಕಿ ಪೆರ್ಡೂರು ತಂಡದಿಂದ ಪೆರ್ಡೂರಿಗೆ ಉಚಿತ ಅಂಬುಲೆನ್ಸ್ ಸೇವೆ : ಪೆರ್ಡೂರು ಪರಿಸರದಲ್ಲೊ ವಿಶೇಷವಾದ ಲೋಬಾನ ಸೇವೆಯನ್ನು ವೀಕ್ಷಿಸಬೇಕು, ಟೀಂ ಶ್ರೀಕಲ್ಕಿ ಪೆರ್ಡೂರು ತಂಡದ ಮೂಲಕ ನಮ್ಮೂರಿನ ಜನರ ಸೇವೆಯನ್ನು ಮಾಡಬೇಕು ಎಂದು ಭರತ್, ಅನಿಲ್ ಮತ್ತು ಸುನೀಲ್ ಹುಮ್ಮಸ್ಸಿನಿಂದ ಕಳೆದ ೨೦೨೫ರಲ್ಲಿ ಟೀಂ ಶ್ರೀಕಲ್ಕಿ ಪೆರ್ಡೂರು ತಂಡ ಸ್ಥಾಪನೆಯಾಗಿದೆ. ಪ್ರಥಮ ವರ್ಷದಲ್ಲಿ ೨೩ ಮಂದಿ ಹುಲಿವೇಷ ಧರಿಸಿ ಅದ್ಭುತ ಪ್ರದರ್ಶನ ನೀಡಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಇದೀಗ ೨ನೇ ವರ್ಷ ಅತ್ಯುತ್ತಮವಾಗಿ ಟೀಂ ಶ್ರೀಕಲ್ಕಿ ಪೆರ್ಡೂರು ತಂಡ ಮುನ್ನಡೆಯುತ್ತಿದೆ. ಸಾರ್ವಜನಿಕವಾಗಿ ಲೋಬಾನ ಸೇವೆಯನ್ನು ಮಾಡಿದ ಕೀರ್ತಿಯು ನಮ್ಮ ತಂಡಕ್ಕೆ ಸಲ್ಲುತ್ತದೆ. ಸಾವಿರಾರು ಮಂದಿ ಲೋಬಾನ ಸೇವೆಯನ್ನು ವೀಕ್ಷಿಸಿ ಟೀಂ ಶ್ರೀಕಲ್ಕಿ ಪೆರ್ಡೂರು ತಂಡಕ್ಕೆ ಹರಸಿದ್ದಾರೆ. ಮುಂದಿನ ವರ್ಷದಿಂದ ಟೀಂ ಶ್ರೀಕಲ್ಕಿ ಪೆರ್ಡೂರು ತಂಡದ ಮೂಲಕ ಪೆರ್ಡೂರು ಗ್ರಾಮದ ಸಾರ್ವಜನಿಕರಿಗೆ ಉಚಿತ ಆಂಬುಲೆನ್ಸ್ ಸೇವೆಯನ್ನು ನೀಡುತ್ತೇವೆ ಎಂದು ತಂಡದ ಪ್ರಮುಖರು ಮಾಹಿತಿ ನೀಡಿದರು. ಬೆಂಗಳೂರು ಜಯಕರ್ನಾಟಕ ಸಂಘಟನೆ ಕಿರಣ್ ಕುಮಾರ್ ನಾಯರಕೋಡು ಮತ್ತು ಪೆರ್ಡೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವು ಪೂಜಾರಿ ಕೈರು ಅವರ ಗೌರವಾಧ್ಯಕ್ಷತೆಯ ಮಾರ್ಗದರ್ಶನದಲ್ಲಿ ದಿಲೀಪ್ ಪೂಜಾರಿ ಅಧ್ಯಕ್ಷರಾಗಿ, ಭರತ್ ಕಾರ್ಯದರ್ಶಿಯಾಗಿ ಮತ್ತು ವಿವೇಕ್ ಕೊಶಾಧಿಕಾರಿಯಾಗಿ ಟೀಂ ಶ್ರೀಕಲ್ಕಿ ಪೆರ್ಡೂರು ತಂಡವನ್ನು ಮುನ್ನಡೆಸುತ್ತಿದ್ದಾರೆ. ೮೫ಕ್ಕೂ ಹೆಚ್ಚು ಸದಸ್ಯರು ಟೀಂ ಶ್ರೀಕಲ್ಕಿ ಪೆರ್ಡೂರು ತಂಡದ ಯಶಸ್ಸಿಗೆ ಕೈಜೋಡಿಸುತ್ತಿದ್ದಾರೆ.
ಸಮಾಜ ಸೇವಕರಾದ ಮುಂಬೈ ಉದ್ಯಮಿ ಹರೀಶ್ ಶೆಟ್ಟಿಯವರು ಟೀಂ ಶ್ರೀಕಲ್ಕಿ ಪೆರ್ಡೂರು ತಂಡಕ್ಕೆ ಶುಭ ಹಾರೈಸಿದರು. ಪಡುಕುಡೂರು ಪಡುಪರ್ಕಳ ಮೀನಾಕ್ಷಿಯಲ್ಲಿ ನೂರಾರು ಮಂದಿ ಹುಲಿವೇಷ ಕುಣಿತ ವೀಕ್ಷಿಸಿ ಅನ್ನಪ್ರಸಾದ ಸ್ವೀಕರಿಸಿದರು.




