ಭಾರತ್ ಜೋಡೋ ಯುವ ಸಂಘಟನೆ ರಚನೆ ಸಹಕಾರ ನೀಡಿ : ಶಂಕರ ಸೇರಿಗಾರ್
ಹೆಬ್ರಿ : ಹೆಬ್ರಿ ತಾಲ್ಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಸಭೆಯು ಇತ್ತೀಚೆಗೆ ಅಧ್ಯಕ್ಷ ಶಂಕರ ಸೇರಿಗಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ಯಾರಂಟಿ ಯೋಜನೆಯ ಗ್ರಾಮ ಮಟ್ಟದ ಸಮಿತಿಯನ್ನು ಶೀಘ್ರವಾಗಿ ರಚಿಸಬೇಕಿದೆ. ಮಹತ್ವಾಕಾಂಕ್ಷೆಯ ಭಾರತ್ ಜೋಡೋ ಯುವ ಸಂಘಟನೆಗೆ ಸೇವಾ ಮನೋಭಾವದ ಯುವಕ ಯುವತಿಯರನ್ನು ಸೇರಿಸಿ ಸಂಘಟನೆಯನ್ನು ಸ್ಥಾಪಿಸಲು ಎಲ್ಲರೂ ಕೈಜೋಡಿಸಿ ಎಂದು ಅಧ್ಯಕ್ಷ ಶಂಕರ ಸೇರಿಗಾರ್ ಮನವಿ ಮಾಡಿದರು.
ಹೆಬ್ರಿ ತಾಲ್ಲೂಕಿನಲ್ಲಿ ಬೇಡಿಕೆ ಇರುವ ಸರ್ಕಾರಿ ಬಸ್ ಗಳನ್ನು ಓಡಿಸಲು ಕ್ರಮ ಕೈಗೊಳ್ಳುವಂತೆ ಸಮಿತಿಯ ಸದಸ್ಯರು ಒತ್ತಾಯಿಸಿದರು.
ದಾರಿ ದೀಪಗಳು ಹಗಲಿನಲ್ಲೂ ಹಲವು ಕಡೆ ಉರಿಯುತ್ತಿರುವ ಬಗ್ಗೆ ಸದಸ್ಯರು ತಿಳಿಸಿದಾಗ ದಾರಿ ದೀಪಗಳನ್ನು ಆರಿಸುವ ಬಗ್ಗೆ ಮೇಲುಸ್ತುವಾರಿ ವಹಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೆಬ್ರಿ ತಾಲ್ಲೂಕು ಪಂಚಾಯತ್ ಪ್ರಭಾರ ಕಾರ್ಯನಿರ್ವಾಹನಾಧಿಕಾರಿ ದಿನೇಶ್ ಎಇ ಹೇಳಿದರು.
ಸಮಿತಿಯ ಸದಸ್ಯರಾದ ರಾಜು ಪೂಜಾರಿ ಕುಚ್ಚೂರು, ವಸಂತ ಪೂಜಾರಿ ಮಡಾಮಕ್ಕಿ, ರಾಜೇಶ್ ಆಚಾರ್ಯ ಹೆಬ್ರಿ, ಸಾವಿತ್ರಿ ಚಾರ, ಶಶಿಕಲಾ ಆರ್‌ಪಿ ಹೆಬ್ರಿ, ರಘುನಾಥ ಪೂಜಾರಿ ಮುನಿಯಾಲು, ಮೆಸ್ಕಾಂ ಎಇಇ ನಾಗರಾಜ್, ಕೆಎಸ್ ಆರ್‌ಟಿಸಿಯ ಭೋಜ ನಾಯ್ಕ್, ಶಿಶು ಅಭಿವೃದ್ಧಿ ಯೋಜನೆಯ ಮೇಲ್ವೀಚಾರಕಿ ಗುಣವತಿ, ತಾಲ್ಲೂಕು ಪಂಚಾಯತಿಯ ಲತಾ ಶೆಟ್ಟಿ, ಗ್ಯಾರಂಟಿ ಸಮಿತಿ ಕಛೇರಿಯ ಶಾಂತಿ ಹಾಜರಿದ್ದರು.



