ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ ಕಲಿಸಬೇಕು : ಪಡುಕುಡೂರು ಹರೀಶ್ ಶೆಟ್ಟಿ.
ಶ್ರೀಕೃಷ್ಣನ ಸಂದೇಶ ಪಾಲಿಸಿ ಜೀವನದಲ್ಲಿ ಮುನ್ನಡೆಯಿರಿ : ಸುಧಾಕರ ನಾಯ್ಕ್.
ಮುನಿಯಾಲು : ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರವನ್ನು ಕಲಿಸಬೇಕು, ಆಗ ಮಾತ್ರ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸಂಘಸಂಸ್ಥೆಯ ಮೂಲಕ ಜನಸೇವೆ, ಒಳ್ಳೇಯ ಕೆಲಸ ಮಾಡಿದಾಗ ದೇವರ ಕೃಪೆ ನಮ್ಮ ಮೇಲೆ ಇರುತ್ತದೆ ಎಂದು ಮುಂಬಯಿಯ ಯುವ ಉದ್ಯಮಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಪಡುಕುಡೂರು ಪಡುಪರ್ಕಳ ಹರೀಶ್ ಶೆಟ್ಟಿ ಹೇಳಿದರು.
ಅವರು ಮುನಿಯಾಲು ಪಾಲ್ ಜಡ್ಡು ಸಂಗಮ್ ಫ್ರೆಂಡ್ಸ್ ವತಿಯಿಂದ ಸಂಗಮ್ ಫ್ರೆಂಡ್ಸ್ ಮೈದಾನದಲ್ಲಿ ಭಾನುವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 18ನೇ ವರ್ಷದ ಮೊಸರು ಕುಡಿಕೆ, ಮನರಂಜನಾ ಆಟೋಟ ಸ್ಫರ್ಧೆಗಳು ಮತ್ತು 5 ವರ್ಷದ ವರೆಗಿನ ಮಕ್ಕಳ ಮುದ್ದುಕೃಷ್ಣ ಸ್ಫರ್ಧೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅತ್ಯಂತ ಗ್ರಾಮೀಣ ಪ್ರದೇಶದಲ್ಲಿ ದೇವರ ಸೇವೆಯ ಹೆಸರಿನಲ್ಲಿ ಕಲೆಯನ್ನು ಉಳಿಸುವ ಮಹಾನ್ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ. ನಿಮ್ಮೇಲ್ಲರಿಗೂ ಶ್ರೀ ದೇವರ ದಯೆ ಇದೆ. ಪಾಲ್ ಜಡ್ಡು ಫ್ರೆಂಡ್ಸ್ ಸಮಾಜಮುಖಿ ಕಾರ್ಯಗಳಿಗೆ ನನ್ನ ಸಹಕಾರವಿದೆ ಎಂದು ಹರೀಶ್ ಶೆಟ್ಟಿ ಹೇಳಿದರು.
ಹೆಬ್ರಿ ಕಾರ್ಕಳ ತಾಲ್ಲೂಕು ಮರಾಠಿ ಸಮಾಜಸೇವಾ ಸಂಘದ ಗೌರವಾಧ್ಯಕ್ಷ ಕುರ್ಪಾಡಿ ಸುಧಾಕರ ನಾಯ್ಕ್ ಮಾತನಾಡಿ ಶ್ರೀಕೃಷ್ಣನ ಸಂದೇಶ ಪಾಲಿಸಿ ಜೀವನದಲ್ಲಿ ಮುನ್ನಡೆಯಿರಿ ಆಗ ಜೀವನ ಉಜ್ವಲವಾಗುತ್ತದೆ. ಪಾಲ್ ಜಡ್ಡು ಫ್ರೆಂಡ್ಸ್ ಸೇವೆ ಜನಮೆಚ್ಚುಗೆ ಪಡೆದಿದೆ ಎಂದು ಶ್ಲಾಘಿಸಿದರು. ಸನ್ಮಾನದ ಪ್ರೀತಿ ನಿಸ್ವಾರ್ಥವಾಗಿ ಮಾಡಿದ ಸೇವೆಗೆ ಸಂದ ಗೌರವ ಎಂದು ಶತಮಾನೋತ್ಸವ ಸಂಭ್ರಮದ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹರೀಶ್ ಪೂಜಾರಿ ಎಸ್ ಕೃತಜ್ಞತೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮುನಿಯಾಲು ಪಾಲ್ ಜಡ್ಡು ಸಂಗಮ್ ಫ್ರೆಂಡ್ಸ್ ಅಧ್ಯಕ್ಷ ಶೇಖರ ನಾಯ್ಕ್ ಪಾಲ್ ಜಡ್ಡು ನಮ್ಮ ಸಂಘಟನೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ವಿವಿಧ ಕ್ಷೇತ್ರಗಳ ಸಾಧಕರಾದ ಉಡುಪಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪಡುಕುಡೂರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಹರೀಶ್ ಪೂಜಾರಿ, ಉದ್ಯಮಿ ಸಮಾಜ ಸೇವಕ ಸುಧಾಕರ ನಾಯ್ಕ್ ಕುರ್ಪಾಡಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜಸೇವಕ ಮಾವಿನಕಟ್ಟೆ ಶಂಕರ ಶೆಟ್ಟಿ ಮುನಿಯಾಲು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಸುಕುಮಾರ್ ಆಚಾರ್ಯ ಖಜಾನೆ ಅವರನ್ನು ಸನ್ಮಾನಿಸಲಾಯಿತು.
ತೀರ್ಪುಗಾರರಾಗಿ ಆಗಮಿಸಿದ್ದ ಶಿಕ್ಷಕಿಯರಾದ ಮಧುಮತಿ, ನಂದಿನಿ ಎಸ್ ಮಾತಿಬೆಟ್ಟು, ಅಂಗನವಾಡಿ ಶಿಕ್ಷಕಿ ಸವಿತಾ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಹುಬ್ಬಳ್ಳಿ ಉದ್ಯಮಿ ಪ್ರತೀಶ್ ನಾಯ್ಕ್, ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿಗಾರ್, ವರಂಗ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ. ಮುದ್ರಾಡಿ ಶುಭದರ ಶೆಟ್ಟಿ, ಪಡುಕುಡೂರು ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ, ಎಳ್ಳಾರೆ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣ ಆಚಾರ್ಯ ಗರ್ಧರಬೆಟ್ಟು, ಕುಕ್ಕುದಕಟ್ಟೆ ಜನನಿ ಫ್ರೆಂಡ್ಸ್ ಅಧ್ಯಕ್ಷ ಚೇತನ್ ಆಚಾರ್ಯ, ಮುನಿಯಾಲು ಪಾಲ್ ಜಡ್ಡು ಸಂಗಮ್ ಫ್ರೆಂಡ್ಸ್ ಗೌರವಾಧ್ಯಕ್ಷ ಹಿರಿಯರಾದ ಭೋಜ ನಾಯ್ಕ್, ಉಪಾಧ್ಯಕ್ಷ ಕೃಷ್ಣ ಮಾವಿನಕಟ್ಟೆ, ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಶೆಟ್ಟಿಗಾರ್, ಕಾರ್ಯದರ್ಶಿ ಗೀತಾ ನಾಯ್ಕ್, ಕ್ರೀಡಾ ಕಾರ್ಯದರ್ಶಿ ಅಜಿತ್, ಸಂಗಮ್ ಫ್ರೆಂಡ್ಸ್ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಪ್ರಮೀಳಾ ನಾಯ್ಕ್ ವರದಿ ಮಂಡಿಸಿದರು. ರಾಮ ಚಟ್ಕಲ್ ಪಾದೆ ನಿರೂಪಿಸಿ ಸ್ವಾಗತಿಸಿ ವಂದಿಸಿದರು. ಜಗದೀಶ್ ಚಟ್ಕಲ್ ಪಾದೆ ಸಹಕರಿಸಿದರು.
ಸಮಾರೋಪ : ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಮರಾಠಿ ಸಮುದಾಯ ಸೇವಾ ಸಂಘದ ಮುಖಂಡ ನವೀನ್ ನಾಯ್ಕ್ ಪೆರ್ಡೂರು, ಹೆಬ್ರಿ ಕಾರ್ಕಳ ತಾಲ್ಲೂಕು ಮರಾಠಿ ಸಮಾಜಸೇವಾ ಸಂಘದ ಗೌರವಾಧ್ಯಕ್ಷ ಕುರ್ಪಾಡಿ ಸುಧಾಕರ ನಾಯ್ಕ್, ಕಾರ್ಕಳ ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷೆ ಸುಲೋಚನಾ ನಾಯ್ಕ್ ಕಾಡುಹೊಳೆ ಬಹುಮಾನವನ್ನು ವಿತರಿಸಿದರು. ಸಂಗಮ್ ಫ್ರೆಂಡ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.





