ಕಡಲ ಜೈವಿಕ ತಂತ್ರಜ್ಞಾನ ಮತ್ತು ‘ಬ್ಲೂ ಬಯೋ ಎಕಾನಮಿ’ಗೆ ಹೊಸ ಉತ್ತೇಜನ: ಪ್ರಿಯಾಂಕ್ ಖರ್ಗೆ
ಮಂಗಳೂರು : ಕರ್ನಾಟಕದ ಕರಾವಳಿ ಪ್ರದೇಶದ ಅಪಾರ ಸಮುದ್ರ ಜೈವಿಕ ಸಂಪನ್ಮೂಲಗಳನ್ನು ಸುಸ್ಥಿರವಾಗಿ ಬಳಸಿಕೊಂಡು ನಾವೀನ್ಯತೆ, ಸಂಶೋಧನೆ, ಉದ್ಯಮಶೀಲತೆ ಹಾಗೂ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ಉದ್ದೇಶದಿಂದ ರೂಪಿಸಲಾಗಿರುವ ‘ಕರ್ನಾಟಕ ಕಡಲ ಜೈವಿಕ ತಂತ್ರಜ್ಞಾನ ನೀತಿ 2026–2031’ಕ್ಕೆ ಶುಕ್ರವಾರ ಮಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಗೃಹ, ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕರ್ನಾಟಕದ 343.3 ಕಿ.ಮೀ. ಉದ್ದದ ಕರಾವಳಿ ಪ್ರದೇಶವು ಸಮೃದ್ಧ ಸಮುದ್ರ ಜೈವಿಕ ವೈವಿಧ್ಯತೆ, ನದಿಮುಖಗಳು, ಮ್ಯಾಂಗ್ರೋವ್‌ಗಳು, ಕಡಲತೀರಗಳು ಹಾಗೂ ವಿವಿಧ ಸಮುದ್ರ ಪರಿಸರ ವ್ಯವಸ್ಥೆಗಳನ್ನು ಹೊಂದಿದೆ. ಮಂಗಳೂರು ಸೇರಿದಂತೆ ಪ್ರಮುಖ ಮೀನುಗಾರಿಕಾ ಬಂದರುಗಳು, ಜಲಕೃಷಿ ವಲಯ, ಬಂದರುಗಳು ಮತ್ತು ಸಮುದ್ರ ವಿಜ್ಞಾನ ಹಾಗೂ ಮೀನುಗಾರಿಕಾ ಸಂಶೋಧನಾ ಸಂಸ್ಥೆಗಳಿರುವುದು ರಾಜ್ಯಕ್ಕೆ ಈ ಕ್ಷೇತ್ರದಲ್ಲಿ ವಿಶಿಷ್ಟ ಸಾಮರ್ಥ್ಯವನ್ನು ಒದಗಿಸುತ್ತದೆ ಎಂದೂ ಸಚಿವರು ಹೇಳಿದ್ದಾರೆ.
2031ರ ವೇಳೆಗೆ ಬ್ಲೂ ಬಯೋ ಎಕಾನಮಿಯನ್ನು ವಿಸ್ತರಿಸುವ ಗುರಿ
ನೀತಿಯಡಿ ಕರ್ನಾಟಕದ ‘ಬ್ಲೂ ಬಯೋ ಎಕಾನಮಿ’ಯನ್ನು 2031ರ ವೇಳೆಗೆ ಪ್ರಸ್ತುತ ಸುಮಾರು 2 ಬಿಲಿಯನ್ ಅಮೆರಿಕನ್ ಡಾಲರ್‌ನಿಂದ 6–8 ಬಿಲಿಯನ್ ಡಾಲರ್ ಮಟ್ಟಕ್ಕೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಮದಿರುವ ಸಚಿವ ಪ್ರಿಯಾಂಕ್ ಖರ್ಗೆ, ಸಮುದ್ರ ಸಂಪನ್ಮೂಲಗಳನ್ನು ಕೇವಲ ಸಾಂಪ್ರದಾಯಿಕ ಚಟುವಟಿಕೆಗಳಿಗೆ ಸೀಮಿತಗೊಳಿಸದೆ, ಔಷಧೀಯ ಉತ್ಪನ್ನಗಳು, ಸೌಂದರ್ಯವರ್ಧಕಗಳು, ಜೈವಿಕ ಗೊಬ್ಬರಗಳು, ಜೈವಿಕ ವಿಘಟನೀಯ ವಸ್ತುಗಳು ಹಾಗೂ ಇತರ ಉನ್ನತ ಮೌಲ್ಯದ ಉತ್ಪನ್ನಗಳಾಗಿ ಪರಿವರ್ತಿಸುವ ಮೂಲಕ ಕರಾವಳಿ ಆರ್ಥಿಕತೆಯಲ್ಲಿ ಹೆಚ್ಚಿನ ಮೌಲ್ಯವರ್ಧನೆ ಸಾಧಿಸುವುದು ನೀತಿಯ ಪ್ರಮುಖ ಉದ್ದೇಶವಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಮೆರೈನ್ ಸಂಸ್ಥೆ ಸ್ಥಾಪನೆ
ಸಮುದ್ರ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ವಾಣಿಜ್ಯೀಕರಣದ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಮೆರೈನ್ ಬಯೋಟೆಕ್ನಾಲಜಿ ಅಂಡ್ ಬ್ಲೂ ಎಕಾನಮಿ (KIMBE) ಸ್ಥಾಪಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದು, ಸರ್ಕಾರಿ ಮೀನುಗಾರಿಕಾ ಕಾಲೇಜಿನಂತಹ ಅಸ್ತಿತ್ವದಲ್ಲಿರುವ ಶೈಕ್ಷಣಿಕ ಹಾಗೂ ಸಂಶೋಧನಾ ಮೂಲಸೌಕರ್ಯವನ್ನು ಬಳಸಿಕೊಂಡು ಆರಂಭಿಕ ಹಂತದಲ್ಲಿ KIMBE ಅನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ. KIMBE ಅಡಿಯಲ್ಲಿ ಸುಧಾರಿತ ಸಮುದ್ರ ಜೈವಿಕ ತಂತ್ರಜ್ಞಾನ ಸಂಶೋಧನಾ ಪ್ರಯೋಗಾಲಯಗಳು, ಸಮುದ್ರ ಜೀವವೈವಿಧ್ಯ ಮತ್ತು ಜೈವಿಕ ಸಂಪನ್ಮೂಲ ಸೌಲಭ್ಯಗಳು, ಬಯೋಬ್ಯಾಂಕ್, ಜೈವಿಕ ನಾವೀನ್ಯತೆ ಮತ್ತು ಇನ್‌ಕ್ಯುಬೇಷನ್ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದಿದ್ದಾರೆ. KIMBE ಹಾಗೂ ಸಂಬಂಧಿತ ಪ್ರಯೋಗಾಲಯಗಳು, ಬಯೋಬ್ಯಾಂಕ್, ಇನ್‌ಕ್ಯುಬೇಷನ್ ಸೆಂಟರ್ ಮತ್ತು ಸಂಸ್ಥಾಪನಾ ವೆಚ್ಚಗಳಿಗೆ ಐದು ವರ್ಷಗಳ ಅವಧಿಯಲ್ಲಿ ₹60 ಕೋಟಿ ವೆಚ್ಚ ಮಾಡಲು ಪ್ರಸ್ತಾವಿಸಲಾಗಿದೆ.
ಸಮುದ್ರ ಜೈವಿಕ ತಂತ್ರಜ್ಞಾನ ವಲಯಗಳ ಅಭಿವೃದ್ಧಿ
ಕರಾವಳಿ ಪ್ರದೇಶಗಳಲ್ಲಿ ಸಂಶೋಧನೆ, ಉತ್ಪಾದನೆ, ನಾವೀನ್ಯತೆ ಮತ್ತು ಉದ್ಯಮಶೀಲತೆಗೆ ಅಗತ್ಯವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು Marine Biotechnology Zones ಅಭಿವೃದ್ಧಿಪಡಿಸಲಾಗುವುದು.
ಈ ವಲಯಗಳ ಮೂಲಕ ಸಂಶೋಧನಾ ಸಂಸ್ಥೆಗಳು, ಸ್ಟಾರ್ಟ್‌ಅಪ್‌ಗಳು, ಕೈಗಾರಿಕೆಗಳು ಮತ್ತು ಕರಾವಳಿ ಸಮುದಾಯಗಳ ನಡುವೆ ಸಂಪರ್ಕವನ್ನು ಬಲಪಡಿಸುವ ಉದ್ದೇಶವಿದೆ ಎಂದು ಸಚಿವರು ವಿವರಿಸಿದ್ದಾರೆ.
ಸಮುದ್ರ ಕಳೆ ಆಧಾರಿತ ಉತ್ಪನ್ನಗಳಿಗೆ SVA-PLI
ಕರ್ನಾಟಕದಲ್ಲಿ ಸಮುದ್ರ ಕಳೆ ಆಧಾರಿತ ಉನ್ನತ ಮೌಲ್ಯದ ಉತ್ಪನ್ನಗಳ ಉತ್ಪಾದನೆಯನ್ನು ಉತ್ತೇಜಿಸಲು Seaweed Value Addition – Production Linked Incentive (SVA-PLI) ಯೋಜನೆಯನ್ನು ಜಾರಿಗೆ ತರಲಾಗುವುದು. ಇದರಡಿ ಹೈಡ್ರೋಕೊಲಾಯ್ಡ್‌ಗಳು, ನ್ಯೂಟ್ರಾಸ್ಯೂಟಿಕಲ್ಸ್, ಔಷಧೀಯ ಪದಾರ್ಥಗಳು, ಕ್ರಿಯಾತ್ಮಕ ಆಹಾರ, ಜೈವಿಕ ಗೊಬ್ಬರಗಳು, ಜೈವಿಕ ಉತ್ತೇಜಕಗಳು, ಸಮುದ್ರ ಜೈವಿಕ ವಸ್ತುಗಳು, ವಿಶೇಷ ಜೈವಿಕ ಆಧಾರಿತ ರಾಸಾಯನಿಕಗಳು ಹಾಗೂ ಇತರ ಉನ್ನತ ಮೌಲ್ಯದ ಸಮುದ್ರ ಕಳೆ ಆಧಾರಿತ ಉತ್ಪನ್ನಗಳಿಗೆ ಉತ್ತೇಜನ ನೀಡಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಯೋಜನೆಗೆ ₹45 ಕೋಟಿ ಮೀಸಲಿಡುವ ಪ್ರಸ್ತಾವವಿದೆ.
‘ಬ್ಲೂ ಕಾರ್ಬನ್’ ಪ್ರಮಾಣೀಕರಣ ಕಾರ್ಯಕ್ರಮ
ಕರ್ನಾಟಕದಲ್ಲಿ ಪೈಲಟ್ ಬ್ಲೂ ಕಾರ್ಬನ್ ಸರ್ಟಿಫಿಕೇಶನ್ ಪ್ರೋಗ್ರಾಂ ಜಾರಿಗೆ ತರಲಾಗುವುದು. ವಾಣಿಜ್ಯ ಸಮುದ್ರ ಕಳೆ ಕೃಷಿ ಹಾಗೂ ಇತರ ಅರ್ಹ ಕರಾವಳಿ ‘ಬ್ಲೂ ಕಾರ್ಬನ್’ ಪರಿಸರ ವ್ಯವಸ್ಥೆಗಳ ಮೂಲಕ ಸಂಗ್ರಹವಾಗುವ ಇಂಗಾಲವನ್ನು ವೈಜ್ಞಾನಿಕವಾಗಿ ಮೌಲ್ಯಮಾಪನ, ಪ್ರಮಾಣೀಕರಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಇದರ ಉದ್ದೇಶ ಎಂದು ವಿವರಿಸಿರುವ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ವೈಜ್ಞಾನಿಕ ವಿಧಾನಗಳು, Monitoring, Reporting and Verification (MRV) ವ್ಯವಸ್ಥೆ ಹಾಗೂ ರಾಜ್ಯ ಮಟ್ಟದ ಕಾರ್ಬನ್ ನೋಂದಣಿ ಅಭಿವೃದ್ಧಿಗೆ ಈ ಕಾರ್ಯಕ್ರಮ ನೆರವಾಗಲಿದೆ, ಮುಂದಿನ ದಿನಗಳಲ್ಲಿ ಸ್ವಯಂಪ್ರೇರಿತ ಕಾರ್ಬನ್ ಮಾರುಕಟ್ಟೆ ಮತ್ತು ಹವಾಮಾನ ಹಣಕಾಸು ವ್ಯವಸ್ಥೆಗಳಲ್ಲಿ ಕರ್ನಾಟಕದ ಭಾಗವಹಿಸುವಿಕೆಗೆ ಇದು ನೆರವಾಗಲಿದೆ ಎಂದಿದ್ದಾರೆ. ಈ ಕಾರ್ಯಕ್ರಮಕ್ಕೆ ₹5 ಕೋಟಿ ಮೀಸಲಿಡುವ ಪ್ರಸ್ತಾವವಿದೆ.
₹120 ಕೋಟಿ ಒಟ್ಟು ಅಂದಾಜು
ನೀತಿಯಡಿ ಕರ್ನಾಟಕ ಸಮುದ್ರ ಜೈವಿಕ ತಂತ್ರಜ್ಞಾನ ಸಂಸ್ಥೆ, ಸಾಮಾನ್ಯ ಮೂಲಸೌಕರ್ಯ, ಸಮುದ್ರ ಜೈವಿಕ ತಂತ್ರಜ್ಞಾನ ವಲಯಗಳು, ಸಮುದ್ರ ಸಸ್ಯಗಳಿಂದ ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆಗೆ ಉತ್ತೇಜನ ಹಾಗೂ ಸಮುದ್ರಾಧಾರಿತ ನೀಲಿ ಇಂಗಾಲ ಪ್ರಮಾಣೀಕರಣ ಸೇರಿದಂತೆ ವಿವಿಧ ಉಪಕ್ರಮಗಳ ಅನುಷ್ಠಾನಕ್ಕಾಗಿ ಐದು ವರ್ಷಗಳ ಅವಧಿಯಲ್ಲಿ ಒಟ್ಟು ₹120 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ ಎಂದೂ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
10,000ಕ್ಕೂ ಹೆಚ್ಚು ಉದ್ಯೋಗ ಮತ್ತು ಜೀವನೋಪಾಯ ಅವಕಾಶ
ನೀತಿಯ ಅನುಷ್ಠಾನದ ಮೂಲಕ 2,500 ಉನ್ನತ ಮೌಲ್ಯದ ತಾಂತ್ರಿಕ ಉದ್ಯೋಗಗಳು ಹಾಗೂ 7,500 ಕರಾವಳಿ ಉದ್ಯಮ ಮತ್ತು ಜೀವನೋಪಾಯ ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಇದರಿಂದ ಸಂಶೋಧನೆ ಮತ್ತು ತಂತ್ರಜ್ಞಾನ ಆಧಾರಿತ ಹೊಸ ಉದ್ಯಮಗಳಿಗೆ ಅವಕಾಶ ಸಿಗುವುದರ ಜೊತೆಗೆ, ಕರಾವಳಿ ಸಮುದಾಯಗಳಿಗೆ ಮೌಲ್ಯವರ್ಧಿತ ಆರ್ಥಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಅವಕಾಶಗಳು ದೊರೆಯಲಿವೆ ಎಂಬ ಮಹತ್ತರ ಸಂಗತಿಯನ್ನು ಸಚಿವರು ಹಂಚಿಕೊಂಡಿದ್ದಾರೆ.
ಸುಸ್ಥಿರ ಸಮುದ್ರ ಸಂಪನ್ಮೂಲ ಬಳಕೆಗೆ ಒತ್ತು
“ಕರ್ನಾಟಕದ ಕರಾವಳಿಯ ಸಮುದ್ರ ಜೈವಿಕ ಸಂಪನ್ಮೂಲಗಳು ರಾಜ್ಯದ ಆರ್ಥಿಕತೆ, ಸಂಶೋಧನೆ ಮತ್ತು ಉದ್ಯೋಗ ಸೃಷ್ಟಿಗೆ ದೊಡ್ಡ ಅವಕಾಶವನ್ನು ಹೊಂದಿವೆ. ಈ ಸಂಪನ್ಮೂಲಗಳನ್ನು ವೈಜ್ಞಾನಿಕವಾಗಿ, ಜವಾಬ್ದಾರಿಯುತವಾಗಿ ಮತ್ತು ಸುಸ್ಥಿರವಾಗಿ ಬಳಸಿಕೊಂಡು ಕರ್ನಾಟಕವನ್ನು ಸಮುದ್ರ ಜೈವಿಕ ತಂತ್ರಜ್ಞಾನ ಮತ್ತು ಬ್ಲೂ ಬಯೋ ಎಕಾನಮಿಯ ಪ್ರಮುಖ ಕೇಂದ್ರವನ್ನಾಗಿ ರೂಪಿಸುವುದು ಈ ನೀತಿಯ ಉದ್ದೇಶ,” ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
“ಸಂಶೋಧನೆ–ನಾವೀನ್ಯತೆ–ಸ್ಟಾರ್ಟ್‌ಅಪ್–ಉದ್ಯಮ–ಉತ್ಪಾದನೆ ಎಂಬ ಸಂಪೂರ್ಣ ಸರಪಳಿಯನ್ನು ನಿರ್ಮಿಸುವ ಮೂಲಕ ಸಮುದ್ರ ಸಂಪನ್ಮೂಲಗಳಿಗೆ ಹೆಚ್ಚಿನ ಮೌಲ್ಯವನ್ನು ಸೃಷ್ಟಿಸಬೇಕು. ಕರಾವಳಿ ಪ್ರದೇಶದ ಯುವಜನರಿಗೆ ಉನ್ನತ ಕೌಶಲ್ಯ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವುದರ ಜೊತೆಗೆ, ಸ್ಥಳೀಯ ಸಮುದಾಯಗಳ ಜೀವನೋಪಾಯವನ್ನು ಬಲಪಡಿಸುವುದು ಸರ್ಕಾರದ ಆದ್ಯತೆಯಾಗಿದೆ,” ಎಂದು ಅವರು ಹೇಳಿದ್ದಾರೆ.
“ಇಂದು ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನೀತಿಗೆ ಅನುಮೋದನೆ ದೊರೆತಿರುವುದು ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ, ನಾವೀನ್ಯತೆ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಹೊಸ ದಿಕ್ಕು ನೀಡಲಿದೆ,” ಎಂದು ಸಚಿವರು ತಿಳಿಸಿದ್ದಾರೆ.



