ಶಿವಮೊಗ್ಗ : ಕಸ್ತೂರಿರಂಗನ್ ವರದಿ ವಿಚಾರದಲ್ಲಿ ರಾಜಕೀಯ ಮಾಡದೆ, ಮಲೆನಾಡಿನ ಜನರ ಹಿತದೃಷ್ಟಿಯಿಂದ ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕು. ವರದಿ ಸಂಪೂರ್ಣವಾಗಿ ರದ್ದಾದರೆ ಮಾತ್ರ ಮಲೆನಾಡಿನ ಜನರು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತೀರ್ಥಹಳ್ಳಿಯಲ್ಲಿ ಶನಿವಾರ ನಡೆದ ಕಸ್ತೂರಿರಂಗನ್ ವರದಿ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವರದಿ ಜಾರಿಗೆ ಸಂಬಂಧಿಸಿದಂತೆ ಮಲೆನಾಡಿನ ಜನರಲ್ಲಿ ಸಾಕಷ್ಟು ಆತಂಕವಿದೆ. ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದರು.
ಕಸ್ತೂರಿ ರಂಗನ್ ಸಮಿತಿ ರಚನೆಗೆ ಕಾರಣವಾದ ಪರಿಸರಾಸಕ್ತರ ಸಂಘಟನೆ ಗೋವಾ ಫೌಂಡೇಶನ್ ಗೆ ವಿದೇಶದಿಂದ ಹಣ ಬರುತ್ತಿದೆ ಎಂಬ ಆರೋಪಗಳಿವೆ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು. ಯೋಜನೆಯ ಉದ್ದೇಶ ಹಾಗೂ ಅದರ ಹಿಂದಿರುವ ವಿಚಾರಗಳ ಬಗ್ಗೆ ಸ್ಪಷ್ಟತೆ ದೊರೆಯಬೇಕು’ ಎಂದು ಹೇಳಿದರು.
ಕಸ್ತೂರಿರಂಗನ್ ವರದಿ ಕುರಿತು ಸುಪ್ರೀಂ ಕೋರ್ಟ್ ಅಥವಾ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತೀರ್ಪು ನೀಡಬಹುದು. ಆದರೆ ಅದನ್ನು ಅನುಷ್ಠಾನಗೊಳಿಸುವ ಹೊಣೆ ಸರ್ಕಾರದ್ದಾಗಿದೆ. ಆದ್ದರಿಂದ ರಾಜ್ಯ ಸರ್ಕಾರವೇ ಮಲೆನಾಡಿನ ಜನರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಂಟಿ ಸರ್ವೇಗೆ ಒತ್ತಾಯ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿ, ಕೇಂದ್ರ ಸರ್ಕಾರದಿಂದ ಕನಿಷ್ಠ ಒಂದು ವರ್ಷದ ಕಾಲಾವಕಾಶ ಪಡೆದುಕೊಳ್ಳಬೇಕು. ಈ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ರೈತರ ಸಹಭಾಗಿತ್ವದಲ್ಲಿ ಜಂಟಿ ಸರ್ವೇ ನಡೆಸಿ ವಾಸ್ತವ ಸ್ಥಿತಿಯನ್ನು ಗುರುತಿಸಬೇಕು ಎಂದು ಹೇಳಿದರು.
‘ಮಲೆನಾಡಿನ ಹಲವು ಪ್ರದೇಶಗಳಲ್ಲಿ ರೈತರಿಗೆ ಹಕ್ಕುಪತ್ರ ನೀಡಲಾಗಿದೆ. ಆದರೆ ಹಕ್ಕುಪತ್ರ ನೀಡಿದ ಬಳಿಕವೂ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸುವಂತಹ ಘಟನೆಗಳು ನಡೆಯುತ್ತಿವೆ. ಹಕ್ಕುಪತ್ರ ನೀಡಿದ ಜಾಗಗಳ ಕುರಿತು ಅಗತ್ಯವಿದ್ದಲ್ಲಿ ಡಿನೋಟಿಫಿಕೇಷನ್ ಪ್ರಕ್ರಿಯೆ ನಡೆಸಬೇಕು’ ಎಂದರು.
ಮಲೆನಾಡಿನಲ್ಲಿ ಸಾಮಾನ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲೂ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕಾದ ಪರಿಸ್ಥಿತಿ ಇದೆ. ಇದರಿಂದ ರಸ್ತೆ, ಮನೆ, ಮೂಲಸೌಕರ್ಯ ಸೇರಿದಂತೆ ಹಲವು ಕೆಲಸಗಳಿಗೆ ತೊಂದರೆಯಾಗುತ್ತಿದೆ. ಜನರು ತಮ್ಮದೇ ಪ್ರದೇಶದಲ್ಲಿ ಯಾವುದೇ ಕೆಲಸ ಮಾಡಲಾಗದ ಸ್ಥಿತಿಗೆ ತಲುಪಿದ್ದಾರೆ ಎಂದು ಹೇಳಿದರು.
‘ಯಾರಾದರೂ ಮೃತಪಟ್ಟರೆ ಅಂತ್ಯಕ್ರಿಯೆ ನಡೆಸಲು ಜಾಗ ಹುಡುಕುವ ಪರಿಸ್ಥಿತಿಯೂ ಎದುರಾಗುತ್ತಿದೆ. ಇಂತಹ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಮಲೆನಾಡಿಗರು ಬದುಕಬೇಕಾದರೆ ಅವರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಈ ಸಮಸ್ಯೆಗೆ ಸರ್ಕಾರ ಇತಿಶ್ರೀ ಹಾಡಬೇಕು’ ಎಂದು ಆರಗ ಜ್ಞಾನೇಂದ್ರ ಒತ್ತಾಯಿಸಿದರು.
ಪಕ್ಷಾತೀತ ಹೋರಾಟ ಅಗತ್ಯ
ಕಸ್ತೂರಿರಂಗನ್ ವರದಿ ವಿಚಾರದಲ್ಲಿ ರಾಜಕೀಯ ಮಾಡದೆ, ಮಲೆನಾಡಿನ ಜನರ ಬದುಕು ಹಾಗೂ ಪರಿಸರ ಎರಡನ್ನೂ ರಕ್ಷಿಸುವ ರೀತಿಯಲ್ಲಿ ನಿರ್ಧಾರ ಕೈಗೊಳ್ಳಬೇಕು. ವರದಿ ಅನುಷ್ಠಾನದಿಂದ ಜನಜೀವನಕ್ಕೆ ಎದುರಾಗಬಹುದಾದ ಸಮಸ್ಯೆಗಳ ಕುರಿತು ಸರ್ಕಾರ ವಾಸ್ತವಾಂಶಗಳನ್ನು ಪರಿಶೀಲಿಸಬೇಕು ಎಂದು ಹೇಳಿದರು.
ಮಲೆನಾಡಿನ ಜನರು ಅರಣ್ಯ ಮತ್ತು ಪರಿಸರವನ್ನು ಸಂರಕ್ಷಿಸಿಕೊಂಡೇ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಸ್ಥಳೀಯರ ಬದುಕು ಹಾಗೂ ಪರಿಸರ ಸಂರಕ್ಷಣೆಯನ್ನು ಸಮನ್ವಯಗೊಳಿಸುವ ಪರಿಹಾರ ಅಗತ್ಯವಾಗಿದೆ ಎಂದು ತಿಳಿಸಿದರು.
ಗುಟ್ಕಾ ನಿಷೇಧದ ಬಗ್ಗೆ ಸ್ಪಷ್ಟನೆ ನೀಡಿ
ಗುಟ್ಕಾ ನಿಷೇಧದ ವಿಚಾರದಲ್ಲಿಯೂ ಜನರಲ್ಲಿ ಗೊಂದಲ ಉಂಟಾಗಿದೆ. ಸರ್ಕಾರ ಈ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದು ಹೇಳಿದರು.
‘ಗುಟ್ಕಾ ನಿಷೇಧ ಮಾಡುವುದಿಲ್ಲ ಎಂದು ಸರ್ಕಾರವೇ ಸ್ಪಷ್ಟವಾಗಿ ಹೇಳಿದರೆ ಅಡಿಕೆ ಬೆಳೆಗಾರರಿಗೆ ಅನುಕೂಲವಾಗಬಹುದು. ಅಡಿಕೆ ಬೆಲೆಯ ಮೇಲೂ ಇದರ ಪರಿಣಾಮ ಬೀರಬಹುದು. ಹೀಗಾಗಿ ಈ ವಿಚಾರದಲ್ಲಿ ಸರ್ಕಾರ ಸ್ಪಷ್ಟನೆ ನೀಡಬೇಕು’ ಎಂದು ಮನವಿ ಮಾಡಿದರು.



