ಜನಸೇವೆಯನ್ನು ಮಾನವೀಯತೆಯಿಂದ ಮಾಡಿ : ಮುದ್ರಾಡಿ ಮಂಜುನಾಥ ಪೂಜಾರಿ.
ಪ್ರಜಾ ಸೇವೆ ಆಂದೋಲನ ಕಾಟಚಾರಕ್ಕೆ ಮಾಡಬೇಡಿ : ಶಂಕರ ಶೇರಿಗಾರ್
ಜನರಿಲ್ಲದೆ ಕಾರ್ಯಕ್ರಮ ಮಾಡಬೇಡಿ : ದಿನೇಶ ಶೆಟ್ಟಿ ಚಾರ
ಹೆಬ್ರಿ : ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ಇಲಾಖೆಗಳ ನಡುವೆ ಸಮನ್ವಯತೆಯನ್ನು ಕಾಯ್ದುಕೊಂಡು ಜನರ ಸಮಸ್ಯೆಯನ್ನು ಪರಿಹಾರ ಮಾಡಿಕೊಡಲು ಪ್ರಜಾ ಸೇವೆ ಉತ್ತಮ ವೇದಿಕೆಯಾಗಿದೆ. ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಾ, ಮಾನವೀಯತೆಗೆ ಮೊದಲ ಪ್ರಶಸ್ತ್ಯ ಕೊಡಬೇಕೆಂದು ರಾಜ್ಯದ ನಾರಾಯಣ ಗುರು ಅಭಿವೃದ್ಧಿ ನಿಗಮ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.
ಹೆಬ್ರಿ ತಾಲ್ಲೂಕು ಆಡಳಿತದ ವತಿಯಿಂದ ಚಾರ ಗ್ರಾಮ ಪಂಚಾಯತಿಯಲ್ಲಿ ಶನಿವಾರ ನಡೆದ ಪ್ರಜಾ ಸೇವೆ ಆಂದೋಲನದಲ್ಲಿ ಮಾತನಾಡಿದರು.
ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಹೆಬ್ರಿ ತಾಲ್ಲೂಕು ಅಧ್ಯಕ್ಷ ಶಂಕರ ಶೇರಿಗಾರ್ ಮಾತನಾಡಿ, ಪ್ರಜಾಸೇವೆ ಆಂದೋಲನವನ್ನು ತರಾತುರಿಯಲ್ಲಿ ಮಾಡಲಾಗಿದೆ. ಪದೇ ಪದೇ ಸ್ಥಳ ಬದಲಾವಣೆಯನ್ನು ಮಾಡುವುದು, ಯಾವುದೇ ಸಮರ್ಪಕ ವ್ಯವಸ್ಥೆಗಳನ್ನು ಮಾಡದಿರುವುದರಿಂದ ಇಲ್ಲಿ ಸಾರ್ವಜನಿಕರಿಗೆ ಗೊಂದಲ ಆಗುತ್ತದೆ. ಅಧಿಕಾರಗಳಿಗೂ ಸಿದ್ಧತೆಗಳಿಗೆ ಸಮಸ್ಯೆಯಾಗುತ್ತದೆ. ನಮ್ಮ ಸರ್ಕಾರದ ಕಾರ್ಯಕ್ರಮಗಳನ್ನು ಕಾಟಚಾರಕ್ಕೆ ಮಾಡಬೇಡಿ. ಹೆಬ್ರಿ ತಾಲ್ಲೂಕು ಕಚೇರಿಯಲ್ಲಿ ಅನೇಕರು ಕೆಲಸ ಗೊತ್ತಿಲ್ಲದವರು ಇರುವುದರ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು ಯಾವುದೇ ಕ್ರಮವಾಗಿಲ್ಲ. ಬಡವರ ಜೊತೆ ಆಟವಾಡಬೇಡಿ, ಜನರ ಕೆಲಸಗಳಿಗೆ ತೊಂದರೆ ಮಾಡಬೇಡಿ, ಜನರ ಕೆಲಸಗಳನ್ನು ವಿಶೇಷ ಆದ್ಯತೆಯಲ್ಲಿ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಗ್ನಿಶಾಮಕ ಠಾಣೆಯ ಸ್ಥಳ ನಿಗದಿ ಮಾಡಿ : ವಾರಾಹಿ ಪೈಪ್ ಲೈನ್ ಕಾಮಗಾರಿಗೆ ಅರಣ್ಯ ಇಲಾಖೆಯ ಅಡ್ಡಿ ಇರುವುದರಿಂದ ಶೀಘ್ರದಲ್ಲಿ ಅಧಿಕಾರಿಗಳು ಸಭೆ ನಡೆಸಿ ಕ್ರಮ ಕೈಗೊಳ್ಳಬೇಕು. ಎರಡು ಕೋಟಿ ಅನುದಾನದಲ್ಲಿ ಹೆಬ್ರಿಯಲ್ಲಿ ನಿರ್ಮಾಣವಾಗುವ ಅಗ್ನಿಶಾಮಕ ಠಾಣೆಯ ಸ್ಥಳವನ್ನು ಶೀಘ್ರದಲ್ಲಿ ನಿಗದಿಪಡಿಸುವಂತೆ ಅಧಿಕಾರಿಗಳಿಗೆ ಮುದ್ರಾಡಿ ಮಂಜುನಾಥ ಪೂಜಾರಿ ಸೂಚನೆ ನೀಡಿದರು.

ಜನರಿಲ್ಲದ ಪ್ರಜಾ ಸೇವೆ ಆಂದೋಲನ : ಸಭಾಭವನದಲ್ಲಿ ಅಧಿಕಾರಿಗಳು ತುಂಬಿದ್ದರು, ಶಾಸಕರು, ಸಹಾಯಕ ಕಮೀಷನರ್ ಗೈರು ಹಾಜರಾಗಿದ್ದಾರೆ. ತರಾತುರಿಯಲ್ಲಿ ಯಾವುದೇ ಸಮರ್ಪಕ ಪ್ರಚಾರವಿಲ್ಲದೆ, ಹಕ್ಕು ಪತ್ರಗಳನ್ನು ನೀಡದೆ, ಕಾಟಚಾರಕ್ಕೆ ಬೆರಳೆಣಿಕೆಯ ಜನರನ್ನು ಸೇರಿಸಿಕೊಂಡು ಜನನೋಪಯೋಗಿಯಾದ ಪ್ರಜಾಸೇವೆ ಕಾರ್ಯಕ್ರಮ ಮಾಡುತ್ತಿರುವುದಕ್ಕೆ ಚಾರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಿನೇಶ್ ಕುಮಾರ್ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.
ಶಾಲಾ ಆಟದ ಮೈದಾನಕ್ಕೆ ತೊಂದರೆ : ಚಾರ ಮಂಡಾಡಿಜೆಡ್ಡು ಹಾಗೂ ಮಣಿಬಚ್ಚಲು ಸಂಪರ್ಕಿಸುವ ರಸ್ತೆಯು ಸಂಪೂರ್ಣ ಹಾಳಾಗಿದೆ. ಮೈದಾನವನ್ನು ನಿರಂತರವಾಗಿ ಶಾಲಾ ಮಕ್ಕಳು, ಸ್ಥಳೀಯ ಮನೆಯವರು ಉಪಯೋಗಿಸುತ್ತಿದ್ದಾರೆ. ರಸ್ತೆ ಹದಿಗೆಟ್ಟಿದ್ದರಿಂದ ವಾಹನಗಳು ಶಾಲಾ ಮೈದಾನದಲ್ಲಿ ಚಲಿಸುತ್ತಿದೆ. ಇದು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ, ರಸ್ತೆಯನ್ನು ದುರಸ್ತಿ ಮಾಡಿಕೊಡಿ ಎಂದು ಚಾರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಾದಿರಾಜ ಶೆಟ್ಟಿ ಮನವಿ ಮಾಡಿದರು.
ಹೆಬ್ರಿ ತಹಸೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೊ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್, ಪೊಲೀಸ್ ಇನ್ಸ್ ಫೆಕ್ಟರ್ ರಾಘವೇಂದ್ರ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.



