Saturday, November 7, 2026
Homeಹೆಬ್ರಿ ನ್ಯೂಸ್ ವಿಶೇಷಹೆಬ್ರಿ : ಸರ್ಕಾರಿ ವ್ಯವಸ್ಥೆಯಲ್ಲಿ ಅವ್ಯವಸ್ಥೆ : ಪ್ರತಿಭಟನೆ.

ಹೆಬ್ರಿ : ಸರ್ಕಾರಿ ವ್ಯವಸ್ಥೆಯಲ್ಲಿ ಅವ್ಯವಸ್ಥೆ : ಪ್ರತಿಭಟನೆ.

ಎಸಿ – ತಹಶೀಲ್ಧಾರ್ ಜೀಪು ಎದುರು ಕುಳಿತು ಪ್ರತಿಭಟಿಸಿದ ಹೋರಾಟಗಾರ ಶ್ರೀಕಾಂತ್ ಪೂಜಾರಿ.

ಸ್ಥಳಕ್ಕೆ ಬಂದು ಮನವೊಲಿಸಿದ ಎಸಿ – ಪ್ರತಿಭಟನೆ ಕೈಬಿಟ್ಟ ಶ್ರೀಕಾಂತ್ ಪೂಜಾರಿ.

ಹೆಬ್ರಿ :  ಹೆಬ್ರಿ ತಾಲ್ಲೂಕಿನ ಸರ್ಕಾರಿ ವ್ಯವಸ್ಥೆಯಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಗುರುವಾರ ಹೆಬ್ರಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು.

10 ಗಂಟೆಯಿಂದ ಹೆಬ್ರಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಆರಂಭಗೊಂಡಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಗತಿಪರ ಹೋರಾಟಗಾರ ಕುಚ್ಚೂರು ಶ್ರೀಕಾಂತ್ ಪೂಜಾರಿ ಮಾತನಾಡಿ ನಮ್ಮದು ಜನಪರ ಹೋರಾಟ, ಹೆಬ್ರಿ ತಾಲ್ಲೂಕು ಆಗಿ ಹಕವಾರು ವರ್ಷ ಕಳೆದರೂ ತಾಲ್ಲೂಕು ಕಚೇರಿಯಲ್ಲಿ ಸಿಬ್ಬಂದಿಗಳಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ವ್ಯವಸ್ಥೆಗಳಿಲ್ಲ. ಹೆಬ್ರಿ ಅವ್ಯವಸ್ಥೆಯ ಆಗರವೇ ಆಗಿವೆ. ಅಧಿಕಾರಿಗಳು, ಜನಪ್ರತಿನಿಧಿಗಳು ಯಾರೂ ಜನರ ಸಮಸ್ಯೆಯನ್ನು ಕೇಳುವುದಿಲ್ಲ. ಜನ ದಿನವೂ ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಹೆಬ್ರಿಯಲ್ಲಿ ಎಲ್ಲವೂ ಸಮಸ್ಯೆಗಳೇ ಆಗಿದೆ ಎಂದು ಹೇಳಿದರು.

ಪ್ರತಿಭಟನೆ ಸ್ಥಳಕ್ಕೆ 11:30ಕ್ಕೆ ಹೆಬ್ರಿ ತಹಶೀಲ್ಧಾರ್ ರಾಕೇಶ್ ಫ್ರಾನ್ಸಿಸ್ ಬ್ರೀಟ್ಟೊ ಆಗಮಿಸಿದಾಗ ಶ್ರೀಕಾಂತ್ ಪೂಜಾರಿ ಕುಚ್ಚೂರು ತಹಶೀಲ್ಧಾರ್ ಜೀಪು ಎದುರು ಕುಳಿತು ಪ್ರತಿಭಟಿಸಿದರು. ಜೀಪು ಎದುರಿನಿಂದ ಎದ್ದು ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.

ಸ್ಥಳದಿಂದ ಕದಲದ ಶ್ರೀಕಾಂತ್ ಪೂಜಾರಿ ಅವರು ನಾವು ಜನರಿಗೋಸ್ಕರ ಪ್ರತಿಭಟನೆ ನಡೆಸುತ್ತಿದ್ದೇವೆ. ತಾಲ್ಲೂಕು ಆಡಳಿತಕ್ಕೆ ಹಲವಾರು ಮನವಿ ನೀಡಿ ಸಾಕಾಗಿದೆ. ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಮತ್ತು ಉಸ್ತುವಾರಿ ಸಚಿವರು ಸ್ಥಳಕ್ಕೆ ಬರಬೇಕು. ಇಲ್ಲದಿದ್ದರೆ ನಾವು ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ತಹಶೀಲ್ಧಾರ್ ಅವರು ಸಹಾಯಕ ಕಮೀಷನರ್ ಅವರಿಗೆ ಮೊಬೈಲ್ ಕರೆ ಮಾಡಿ ಮಾತನಾಡಿಸಿ ಮನವೊಲಿಸಿದರೂ ಶ್ರೀಕಾಂತ್ ಪೂಜಾರಿ ಕುಚ್ಚೂರು ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು.

ಜನರ ಸಮಸ್ಯೆಯನ್ನು ಪರಿಹರಿಸಲು ನಮ್ಮ ಮನವಿ ಸ್ವೀಕರಿಸಲು ನಿಮಗೆ ಸಾಧ್ಯವಿಲ್ಲದ್ದರೆ ನಮಗೆ ವಿಷ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಚ್ಚೂರು ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬಾದ್ಲು ಮಾತನಾಡಿ ಕುಚ್ಚೂರು ಶ್ರೀಕಾಂತ್ ಪೂಜಾರಿ ಜನರಿಗಾಗಿ ನಡೆಸುವ ಹೋರಾಟಕ್ಕೆ ಅಧಿಕಾರಿಗಳು, ಜನಪ್ರಗತಿ ನಿಧಿಗಳು ಸಹಕಾರ ನೀಡಬೇಕು. ವಿಳಂಬವಿಲ್ಲದೆ ಸರ್ಕಾರಿ ಕೆಲಸವನ್ನು ಜನರಿಗೋಸ್ಕರ ಮಾಡಬೇಕು ಎಂದು ಒತ್ತಾಯಿಸಿದರು.

ಹೆಬ್ರಿಯ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು, ಪ್ರಮುಖರು, ರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯರು, ಹೆಬ್ರಿ ತಾಲ್ಲೂಕಿನ ವಿವಿಧ ಗ್ರಾಮಗಳ ಪ್ರಮುಖರು, ಗ್ರಾಮಸ್ಥರು ಭಾಗವಹಿಸಿದ್ದರು.ಮಂಜುನಾಥ ಕನ್ಯಾನ ನಿರೂಪಿಸಿದರು.

1 : 30ಕ್ಕೆ ಸ್ಥಳಕ್ಕೆ ಆಗಮಿಸಿದ ಎಸಿ : ಹೋರಾಟಗಾರ ಕುಚ್ಚೂರು ಶ್ರೀಕಾಂತ್‌ ಪೂಜಾರಿ ಅವರ ಒತ್ತಾಯಕ್ಕೆ ಮಣಿದು ಸ್ಥಳಕ್ಕೆ 1:30ಕ್ಕೆ ಕುಂದಾಪುರದ ನೂತನ ಸಹಾಯಕ ಕಮೀಷನರ್‌ ಮಹೇಶ್‌ ಪಿಎಸ್‌ ಸ್ಥಳಕ್ಕೆ ಆಗಮಿಸಿ ಮನವೊಲಿಸಿ ಹೆಬ್ರಿಯ ಪ್ರಮುಖ 17 ಬೇಡಿಕೆಗಳ ಮನವಿಯನ್ನು ಸ್ವೀಕರಿಸಿ, ತಾಲ್ಲೂಕು ಕಚೇರಿಯ ಸಿಬಂದ್ಧಿ ಕೊರತೆ, ಆಧಾರ್‌ ಕೇಂದ್ರ ಸಹಿತ ಕಂದಾಯ ಇಲಾಖೆಯ ಬೇಡಿಕೆಯನ್ನು ಹಂಹಹಂತವಾಗಿ ಈಡೇರಿಸುವ ಭರವಸೆ ನೀಡಿದರು. ಇತರ ಇಲಾಖೆಯ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಂಬಂಧಿಸಿದ ಇಲಾಖೆಗಳಿಗೆ ಪತ್ರ ಬರೆದು ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು. ಹೆಬ್ರಿಯ ಎಂಆರ್‌ ಎಫ್‌ ಘಟಕಕ್ಕೆ ಬೆಂಕಿ ಬಿದ್ದು ನಷ್ಟ ಆಗಿರುವ ಬಗ್ಗೆ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಮಾಹಿತಿ ಕೊಡಿಸಿದರು. ಹೆಬ್ರಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ದಿನೇಶ್‌ ಡಿ.ಈ ಮಾಹಿತಿ ನೀಡಿ ಎಂಆರ್‌ಎಫ್‌ ಘಟಕಕ್ಕೆ ಬೆಂಕಿ ಬಿದ್ದಿರುವ ಬಗ್ಗೆ ಪೊಲೀಸ್‌ ತನಿಖೆ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿಯಬೇಕಿದೆ ಎಂದರು. ಗ್ರಾಮ  ಪಂಚಾಯಿತಿಗೆ ಸಂಬಂಧಿಸಿದ ಬೇಡಿಕೆಗಳನ್ನು ಆದ್ಯತೆಯ ನೆಲೆಯಲ್ಲಿ ಈಡೇರಿಸುತ್ತೇವೆ ಎಂದು ಅಭಿವೃದ್ಧಿ ಅಧಿಕಾರಿ ಅಶೋಕ್‌ ತಿಳಿಸಿದರು.

ವಿವರವಾಗಿ ಚರ್ಚಿಸಿದ ಬಳಿಕ ಪ್ರತಿಭಟನೆ ಕೈಬಿಡಲು ನಿರ್ಧರಿಸಿದ ಹೋರಾಟಗಾರ ಕುಚ್ಚೂರು ಶ್ರೀಕಾಂತ್‌ ಪೂಜಾರಿ ನಿಮ್ಮ ಭರವಸೆಯ ಮೇಲೆ ಪ್ರತಿಭಟನೆಯನ್ನು ನಿಲ್ಲಿಸುತ್ತೇವೆ. ಬೇಡಿಕೆ ಈಡೇರಿಸದಿದ್ದರೆ ಮುಂದು ಹೋರಾಟ ಮುಂದುವರಿಸುತ್ತೇವೆ ಎಂದರು. ಹೆಬ್ರಿ ತಹಶೀಲ್ಧಾರ್‌ ರಾಕೇಶ್‌ ಪ್ರಾನ್ಸಿಸ್‌ ಬ್ರೀಟ್ಟೋ ಶ್ರೀಕಾಂತ್‌ ಪೂಜಾರಿ ಅವರಿಗೆ ಜ್ಯೂಸ್‌ ನೀಡಿ ಪ್ರತಿಭಟನೆ ಕೈಬಿಡುವಂತೆ ತಿಳಿಸಿದಾಗ ಜ್ಯೂಸ್‌ ಕುಡಿದು ಪ್ರತಿಭಟನೆಗೆ ಸಹಕಾರ ನೀಡಿದ ಗ್ರಾಮಸ್ಥರು, ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸಿದರು.ಹೆಬ್ರಿ ಪಿಡಿಒ ಅಶೋಕ್‌, ಕಂದಾಯ ನಿರೀಕ್ಷಕ ಸುಧೀರ್‌ ಶೆಟ್ಟಿ, ಪೊಲೀಸ್‌ ಅಧಿಕಾರಿಗಳು ಹಾಜರಿದ್ದರು.

……..

ಹೆಬ್ರಿ ತಾಲ್ಲೂಕಿನ ಅಭಿವೃದ್ಧಿಗೆ – ಜನರ ಅಉಕೂಲಕ್ಕಾಗಿ ಶ್ರೀಕಾಂತ್‌ ಪೂಜಾರಿ ಅವರ 17 ಬೇಡಿಕೆಗಳು.

ಹೆಬ್ರಿ ತಾಲೂಕಿನ ಸರಕಾರಿ ಕಚೇರಿಗಳಲ್ಲಿ  ಹೆಚ್ಚುತ್ತಿರುವ ಸಮಸ್ಯೆಗಳು ಸೃಷ್ಟಿಯಾಗುತ್ತಿದ್ದರೂ ಅಧಿಕಾರಿಗಳು ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರೆ.

1, ಹೆಬ್ರಿಯ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಹೆಸರಿಗೆ ಮಾತ್ರ ದೊಡ್ಡದಿದ್ದು , ವ್ಯವಸ್ಥೆಗಳು, ಹಾಗೂ ಸರಿಯಾದ ಚಿಕಿತ್ಸೆಗಳು ಸಿಗದೇ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಉಂಟಾಗಿದ್ದು ಕೂಡಲೇ ಸದ್ರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಸಮಸ್ಯೆಗಳನ್ನು ಪಡಿಸಬೇಕಾಗಿದೆ.

2. ಹೆಬ್ರಿ ತಾಲೂಕಿನ ತಾಲೂಕು ಕಚೇರಿ, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಗಳಲ್ಲಿ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕೊರತೆಯಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗಿ ತೊಂದರೆ ಆಗುತ್ತಿದೆ.

3. ಹೆಬ್ರಿ ತಾಲೂಕು ಪಂಚಾಯತ್ ಎಂ ಆರ್ ಎಫ್ ಘಟಕಕ್ಕೆ ಬೆಂಕಿ ಬಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿರುತ್ತದೆ. ಇದರ ಬಗ್ಗೆ ಸೂಕ್ತ ತನಿಖೆ ಇಲ್ಲದೆ ಕಾಟಚಾರಕ್ಕೆ ವರದಿ ಮಾಡಿದ್ದು, ಅದನ್ನು ಕೂಡಲೇ ಮತ್ತೆ ಪ್ರಾರಂಭಿಸುವ ಕುರಿತು, ವಿಳಂಬವಾಗಿ ಹೆಬ್ರಿ ಸುತ್ತಮುತ್ತ ಕಸ ಎಲ್ಲೆಂದರಲ್ಲಿ ಕಸದ ರಾಶಿ ಆಗುತ್ತಿದೆ.

4) ಹೆಬ್ರಿಯ ಅಂಚೆ ಕಚೇರಿಗೆ ಸ್ವಂತ ನಿವೇಶನ ಇದ್ದರು ಖಾಸಗಿ ಕಟ್ಟಡ ಎರಡನೇ ಮಹಡಿಗೆ ಹೋಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಅಂಚೆ ಕಚೇರಿಗೆ ವಯೋ ವೃದ್ಧರು, ಅನಾರೋಗ್ಯ ಪೀಡಿತರಿಗೆ ಮೆಟ್ಟಿಲುಗಳನ್ನು ಹತ್ತಿ ಹೋಗಲು ತುಂಬಾ ಕಷ್ಟವಾಗಿದೆ. ಅಂಚೆ ಕಚೇರಿಯ ನಿವೇಶನದಲ್ಲಿ ಕೂಡಲೇ ಕಟ್ಟಡ ನಿರ್ಮಿಸಬೇಕು.

5) ಹೆಬ್ರಿ ತಾಲೂಕಿನ ತಾಲೂಕು ಕಚೇರಿ ಅಥವಾ ತಾಲೂಕು ಪಂಚಾಯತ್ ಕಚೇರಿಯಲ್ಲಿ ಆಧಾರ್ ಕಾರ್ಡ್  ಕೇಂದ್ರವನ್ನು ಶಾಶ್ವತವಾಗಿ ತೆರೆದು ಕಾರ್ಯನಿರ್ವಹಿಸುವಂತೆ ಮಾಡಬೇಕು.

6) ಹೆಬ್ರಿಯ ಪೇಟೆಯಲ್ಲಿ ಚರಂಡಿಯ ವ್ಯವಸ್ಥೆಗಳು ಇಲ್ಲದೆ ರಸ್ತೆಗಳಲ್ಲಿ ಸಣ್ಣ ಮಳೆ ಬಂದರೆ ಕೆರೆಗಳಂತೆ ಆಗುತ್ತಿದ್ದು, ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ತೊಂದರೆಗಳು ಆಗುತ್ತಿದೆ.

7)  ಕಸ್ತೂರಿ ರಂಗನ್ ವರದಿಯ ಬಗ್ಗೆ ಗ್ರಾಮ, ಗ್ರಾಮಗಳಲ್ಲಿ ಸಭೆ ನಡೆಸಿ ಜನರ ಸಮಸ್ಯೆಗಳ ಬಗ್ಗೆ ವರದಿಯನ್ನು ಸರ್ಕಾರಕ್ಕೆ ಕಳುಹಿಸದೆ ಇರುವ ಕುರಿತು*

8) 169ಎ ರಾಷ್ಟ್ರೀಯ ಹೆದ್ದಾರಿ ಹೆಬ್ರಿ ಪೇಟೆಯ ಮಧ್ಯದಲ್ಲಿ ಹಾದು ಹೋಗುವುದರಿಂದ ಶಾಲಾ ಮಕ್ಕಳಿಗೆ, ಸ್ಥಳೀಯ ವಾಹನ ಸವಾರರಿಗೆ, ನಾಗರಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಕೂಡಲೇ ರಸ್ತೆಯನ್ನು  ವಿಸ್ತರಣೆ ಮಾಡಬೇಕು.

9) ಹೆಬ್ರಿಯ ಸರ್ಕಾರಿ ಬಸ್ ನಿಲ್ದಾಣದ ಕಾಮಗಾರಿ ಅಂದಾಜು 4 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು ಶೀಘ್ರವಾಗಿ ಪೂರ್ಣಗೊಳಿಸಬೇಕು.

10) ಅಕ್ರಮ ಸಕ್ರಮದ 94ಸಿ ಹಾಗೂ 57 ಅರ್ಜಿಗಳು ವಿಲೇವಾರಿಯಾಗದೆ ಬಡ ಜನರಿಗೆ ಕೃಷಿಕರಿಗೆ ತೊಂದರೆಯಾಗುತ್ತಿದ್ದು, ಶೀಘ್ರವಾಗಿ ಇತ್ಯರ್ಥ ಮಾಡಬೇಕು*

11) ಹೆಬ್ರಿ ತಾಲೂಕಿನಲ್ಲಿ ಅಗ್ನಿಶಾಮಕ ಘಟಕಕ್ಕೆ ಮಂಜೂರಾದ ನಿವೇಶನದಲ್ಲಿ ಅಗ್ನಿಶಾಮಕ ಘಟಕವನ್ನು ಪ್ರಾರಂಭಿಸಬೇಕು.

12)  ಹೆಬ್ರಿ ತಾಲೂಕಿನ ಜನರು ಸಬ್ ರಿಜಿಸ್ಟರ್ ಕಚೇರಿಗೆ ಹೋಗಬೇಕೆಂದರೆ ದೂರದ  ಉಡುಪಿ, ಕಾರ್ಕಳ ಬ್ರಹ್ಮಾವರಕ್ಕೆ ಹೋಗಬೇಕಾದ ಪರಿಸ್ಥಿತಿ ಇದ್ದು, ಕೂಡಲೇ ಹೆಬ್ರಿ ತಾಲೂಕಿಗೆ ಶೀಘ್ರವಾಗಿ ಸಬ್ ರಿಜಿಸ್ಟರ್ ಕಚೇರಿ ರಚನೆ ಮಾಡಿ ಕಾರ್ಯನಿರ್ವಹಿಸಂತೆ ಮಾಡಬೇಕು.

13) ಪ್ರಾದೇಶಿಕ ಸಾರಿಗೆ ಕಚೇರಿಯ ಘಟಕವನ್ನು ತೆರೆಯಬೇಕು.

14) ವಾರಾಹಿ ನೀರಾವರಿ ಅವ್ಯವಸ್ಥೆಗಳನ್ನು ಸರಿಪಡಿಸಬೇಕು.

15 – ಅರಣ್ಯ ಇಲಾಖೆಯಿಂದ ಅರಣ್ಯ ಅಂಚಿನ ಪ್ರದೇಶ ಜನರಿಗೆ ಆಗುತ್ತಿರುವ  ಸಮಸ್ಯೆಯನ್ನು ಸರಿಪಡಿಸಬೇಕು. ಹೀಗೆ ಹಲವು ಬೇಡಿಕೆಯನ್ನು ಶ್ರೀಘ್ರವಾಗಿ ಸರಿಪಡಿಸಬೇಕು,

16. ಹೆಬ್ರಿಯ ಎಂಆರ್‌ ಎಫ್‌ ಘಟಕಕ್ಕೆ ಬೆಂಕಿ ಪ್ರಕರಣ ಸರಿಯಾದ ತನಿಖೆ ನಡೆಸದೆ ಕಾಟಾಚಾರಕ್ಕೆ ವರದಿ ನೀಡಲಾಗಿದೆ. ಇನ್ನಷ್ಟು ಸಮಗ್ರ ತನಿಖೆ ನಡೆಸಬೇಕು.

17 . ಹೆಬ್ರಿ ತಾಲ್ಲೂಕಿನ ಹಲವು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಕೆಲವು ಶಾಲೆಗಳು ಈಗಾಗಲೇ ಮುಚ್ಚಿವೆ. ಹಲವು ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಹಲವೆಡೆ ಶಿಕ್ಷಕರ ಕೊರತೆಯಿಂದ ಊರಿನ ಅತಿಥಿ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಕೂಡಲೇ ಶಿಕ್ಷಕರನ್ನು ನೇಮಿಸಬೇಕು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!