ಶಿವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಮವಸ್ತ್ರ ಕೊಡುಗೆ ಹಸ್ತಾಂತರ.
ಶಿವಪುರ : ಅಂದು ನಾವು ಶಾಲೆಗೆ ಹೋಗುವುದೇ ಕಷ್ಟವಾಗಿತ್ತು. ಇಂದು ಮಕ್ಕಳಿಗೆ, ಮನೆಯವರಿಗೆ ಕಷ್ಟವಿದ್ದರೂ ಸಹೃದಯ ದಾನಿಗಳು ಸರ್ಕಾರಿ ಶಾಲೆಗಳ ಮಕ್ಕಳ ಕಲಿಕೆಗೆ ಸಹಾಯ ಸಹಕಾರ ಮಾಡುತ್ತಾರೆ.
ಶಾಲೆಯಲ್ಲಿ ಸಕಲ ವ್ಯವಸ್ಥೆಗಳಿವೆ. ಕಲಿಕೆಗೆ ಪೂರಕ ವಾತಾವರಣ ಇದೆ. ಮಕ್ಕಳು ಮನಸ್ಸಿಟ್ಟು ಕಲಿತು ಉನ್ನತ ಮಟ್ಟದ ಸ್ಥಾನಕ್ಕೆ ಹೋಗಬೇಕು. ಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡಬೇಕು ಎಂದು ಶಿವಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮುರ್ಸಾಲು ಮೋಹನದಾಸ ನಾಯಕ್ ಹೇಳಿದರು. ಅವರು ಶಿವಪುರ ಶಾಲೆಯ ಮಕ್ಕಳಿಗೆ ದಾನಿಗಳು ನೀಡಿದ ಸಮವಸ್ತ್ರವನ್ನು ಹಸ್ತಾಂತರಿಸಿ ಮಾತನಾಡಿದರು.
ಇದೇ ಸಂಧರ್ಭದಲ್ಲಿ ಶಿವಪುರ ಗ್ರಾಮದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿ ಜನಮೆಚ್ಚುಗೆ ಪಡೆದು ಕಂದಾಯ ನಿರೀಕ್ಷಕರಾಗಿ ಪದೋನ್ನತಿ ಪಡೆದ ರಾಚಪ್ಪಜಿ ಅವರ ಸೇವೆಯನ್ನು ಮೋಹನದಾಸ ನಾಯಕ್ ಸ್ಮರಿಸಿದರು.
ಮುಖಂಡರಾದ ಶಿವಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ ಶೆಟ್ಟಿ ಮಾತನಾಡಿ ಇಂದು ದಾನಿಗಳು ಮಕ್ಕಳಿಗೆ ಯಾವೂದು ಕಮ್ಮಿ ಮಾಡುವುದಿಲ್ಲ. ಮಕ್ಕಳು ಕಲಿತು ಸಾಧನೆ ಮಾಡಬೇಕು ಕೀರ್ತಿ ತರಬೇಕು ಎಂದರು.
ಶಿವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಘವೇಂದ್ರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಂದಾಯ ನಿರೀಕ್ಷಕ ರಾಚಪ್ಪಜಿ, ಕಾರ್ಯಕ್ರಮದ ಸಂಘಟಕರಾದ ಸಮಾಜ ಸೇವಕರಾದ ಬೈಕಾಡಿ ಮಂಜುನಾಥ ರಾವ್ ಶಿವಪುರ, ಹೆಬ್ರಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಕುಮಾರ್, ವಿದ್ಯುತ್ ಗುತ್ತಿಗೆದಾರ ಉದ್ಯಮಿ ಶ್ರೀನಿವಾಸ ಹೆಬ್ಬಾರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಸುಮಿತ್ರಾ ನಾಯ್ಕ್, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಅನಸೂಯ, ಗ್ರಾಮ ಸಹಾಯಕ ಮೂರ್ತಿ, ಮುಖ್ಯ ಶಿಕ್ಷಕಿ ಗುಲಾಬಿ ಅಣ್ಣಪ್ಪ ಕುಲಾಲ್, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶಿಕ್ಷಕರು, ಪ್ರಮುಖರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಣ ರಮಾನಂದ ಶೆಟ್ಟಿ ನಿರೂಪಿಸಿ ಮುಖ್ಯ ಶಿಕ್ಷಕಿ ಗುಲಾಬಿ ಅಣ್ಣಪ್ಪ ಕುಲಾಲ್ ಸ್ವಾಗತಿಸಿದರು.



