ಶಿವಪುರ : ಶಿವಪುರ ಕುಲಾಲ ಸಂಘ ಹಾಗೂ ಕುಲಾಲ ಮಹಿಳಾ ಘಟಕದ ಆಶ್ರಯದಲ್ಲಿ 6ನೇ ವರ್ಷದ “ಸಾಮೂಹಿಕ ವರಮಹಾ ಲಕ್ಷ್ಮೀ ವ್ರತ ಪೂಜೆ” ಆಚರಣೆಯು ಶುಕ್ರವಾರ ಶಿವಪುರ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನದ ಶ್ರೀ ಶಂಕರ ಸಭಾಭವನದಲ್ಲಿ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ಜರುಗಿತು.
ಪೂರ್ವಾಹ್ನ ಪ್ರಾರಂಭಗೊಂಡ ಧಾರ್ಮಿಕ ವಿಧಿವಿಧಾನದಲ್ಲಿ ಕಳಸ ಪ್ರತಿಷ್ಠಾಪನೆ, ವರಮಹಾ ಲಕ್ಷ್ಮೀ ಪೂಜೆ ಹಾಗೂ ವಿಧಿವಿಧಾನಗಳು ಮಂತ್ರಘೋಷಗಳೊಂದಿಗೆ ನೆರವೇರಿತು. ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಸಾಮೂಹಿಕ ಪೂಜೆಯಲ್ಲಿ ಪಾಲ್ಗೊಂಡು ದೇವಿಗೆ ಅರಿಶಿನ ಕುಂಕುಮ, ಬಳೆ, ಹೂವು ಹಾಗೂ ಪ್ರಸಾದವನ್ನು ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದರು.
ದೇವಾಲಯದ ಸಭಾಂಗಣದಲ್ಲಿ ಅಲಂಕೃತಗೊಂಡ ಲಕ್ಷ್ಮೀ ದೇವಿಯ ಮೂರ್ತಿ ಹಾಗೂ ಸಾಮೂಹಿಕ ಪೂಜೆಯಲ್ಲಿ ಭಾಗವಹಿಸಿದ ನೂರಾರು ಭಕ್ತಾದಿಗಳು ಧಾರ್ಮಿಕ ವಾತಾವರಣವನ್ನು ಇಮ್ಮಡಿಗೊಳಿಸಿದರು.
ಮಹಾಮಂಗಳಾರತಿ ಬಳಿಕ ಭಕ್ತಾದಿಗಳಿಗೆ ಅನ್ನಪ್ರಸಾದ ನಡೆಯಿತು.
ಕುಲಾಲ ಸಂಘದ ಅಧ್ಯಕ್ಷರಾದ ವಾಸು ಕುಲಾಲ್, ಕಾರ್ಯದರ್ಶಿ ಮಣಿಕಂಠ ಕುಲಾಲ್, ಮಹಿಳಾ ಘಟಕದ ಪ್ರಮುಖರಾದ ಸುನಂದ ಕುಲಾಲ್, ಪೂರ್ಣಿಮಾ ಕುಲಾಲ್, ರೇಖಾ ಕುಲಾಲ್ ಪದಾಧಿಕಾರಿಗಳು, ಸರ್ವಸದಸ್ಯರು ಹಾಗೂ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.




