ಪ್ರಗತಿಪರ ನಾಗರಿಕ ಸೇವಾ ಸಮಿತಿಯಿಂದ ಪ್ರತಿಭಟನೆ.
ಹೆಬ್ರಿ : ಹೆಬ್ರಿಯ ಬ್ರಹ್ಮಾವರ ರಸ್ತೆಯಲ್ಲಿ ಇತ್ತೀಚೆಗೆ ಅಪಾಯಕಾರಿ ಮರವೊಂದು ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು ವ್ಯಕ್ತಿಯೊರ್ವರು ಮೃತಪಟ್ಟ ಹಿನ್ನೆಲೆಯಲ್ಲಿ ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಹೆಬ್ರಿಯಲ್ಲಿ ಗುರುವಾರ ಪ್ರಗತಿಪರ ನಾಗರಿಕರ ಸೇವಾ ಸಮಿತಿಯ ವತಿಯಿಂದ ಹೆಬ್ರಿ ಬಸ್ ನಿಲ್ದಾಣದಿಂದ ವಲಯ ಅರಣ್ಯಾಧಿಕಾರಿಗಳ ಕಚೇರಿಯ ತನಕ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ಪ್ರತಿಭಟನೆ ನಡೆಸಲಾಯಿತು.
ಹೆಬ್ರಿಯ ಬ್ರಹ್ಮಾವರ ರಸ್ತೆಯಲ್ಲಿ ಆಗಸ್ಟ್ 07 ರಂದು ಸಂಜೆಯ ಹೊತ್ತಿನಲ್ಲಿ ಹೆಬ್ರಿಯ ಹುತ್ತುರ್ಕೆ ಎಂಬಲ್ಲಿ ಕಳ್ತೂರು ಸಂತೆಕಟ್ಟೆಯ ನಿವಾಸಿ ಸದಾನಂದ ನಾಯಕ್ ಎಂಬವರು ತನ್ನ ಕಾರು ಚಲಾಯಿಸಿಕೊಂಡು ಹೆಬ್ರಿ ಕಡೆ ಹೋಗುತ್ತಿದ್ದಾಗ ಆಕಸ್ಮಾತಾಗಿ ಬೃಹತ್ತಾಕಾರದ ಮರವು ಅವರ ಕಾರಿನ ಮೇಲೆ ಬಿದ್ದು ಅವರ ಜೀವವನ್ನು ಬಲಿ ತೆಗೆದುಕೊಂಡಿದೆ. ಅರಣ್ಯ ಇಲಾಖೆಯ ದಿವ್ಯ ನಿರ್ಲಕ್ಷದಿಂದ ನಡೆದಂತಹ ಈ ದುರ್ಘಟನೆಯು ಒಬ್ಬ ಅಮಾಯಕನ ಜೀವ ಬಲಿ ತೆಗೆದುಕೊಂಡಿದೆ.
ರಸ್ತೆ ಬದಿಯ ಅಸುರಕ್ಷಿತ ಮರಗಳನ್ನು ತೆರವುಗೊಳಿಸುವುದಾಗಲಿ, ರಸ್ತೆಗೆ ವಾಲಿ ಕೊಂಡಿರುವ ಹಾಗೂ ಒಣಗಿದ ಮರಗಳನ್ನು ಕೂಡಾ ತೆಗೆಯುವಲ್ಲಿ ಅರಣ್ಯ ಇಲಾಖೆ ಸದಾ ನಿರ್ಲಕ್ಷವನ್ನು ತೋರಿಸುತ್ತಿದೆ ಎಂದು ಹೋರಾಟಗಾರ ಮುಟ್ಲುಪಾಡಿ ಸತೀಶ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಕಾಲ ಕಾಲಕ್ಕೆ ಯಾವುದೇ ಅನಾಹುತಗಳು ಆಗದಂತೆ ಎಚ್ಚರಿಕೆಯಿಂದ ಇರಬೇಕಾಗಿದ್ದ ಅರಣ್ಯ ಇಲಾಖೆ ಈ ದುರ್ಘಟನೆಗೆ ಮತ್ತು ತನಗೆ ಯಾವುದೇ ಸಂಬಂಧವಿಲ್ಲ ಎನ್ನುವ ರೀತಿ ವರ್ತಿಸುತ್ತಿದೆ ಸರಿಯಲ್ಲ ಎಂದು ಸತೀಶ್ ಶೆಟ್ಟಿ ಮುಟ್ಲುಪಾಡಿ ಹೇಳಿದರು.
ದುಃಖತಪ್ತ ಸದಾನಂದ ನಾಯಕ್ ಕುಟುಂಬಕ್ಕೆ ಯಾವುದೇ ಪರಿಹಾರವನ್ನು ಘೋಷಿಸಲಿಲ್ಲ. ಅರಣ್ಯ ಇಲಾಖೆಯವರ ಪ್ರಕಾರ ಸಾರ್ವಜನಿಕರ ಜೀವಕ್ಕೆ ಯಾವುದೇ ಬೆಲೆ ಇಲ್ಲ. ತನ್ನ ಬೇಜವಾಬ್ದಾರಿಯುತ ನಡವಳಿಕೆಯನ್ನು ತಿದ್ದಿಕೊಳ್ಳಬೇಕು. ದೊಡ್ಡ ಪ್ರಮಾಣದ ಪರಿಹಾರ ನೀಡಬೇಕು ಎಂದು ಪ್ರತಿಭಟನೆಯ ಸಂಘಟಕರಾದ ಪ್ರಗತಿಪರ ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹೋರಾಟಗಾರ ಅಣ್ಣಪ್ಪ ಕುಲಾಲ್ ಮಂಡಾಡಿಜಡ್ಡು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಸಂಘಟನೆಯ ಪ್ರಮುಖರಾದ ರಘುರಾಮ ಶೆಟ್ಟಿ, ನರಸಿಂಹ ನಾಯಕ್ ಸಂತೆಕಟ್ಟೆ, ಗುಳ್ಕಾಡು ಭಾಸ್ಕರ ಶೆಟ್ಟಿ, ರಾಜೀವ ಶೆಟ್ಟಿ, ಕೃಷ್ಣ ಶೆಟ್ಟಿ, ರಂಗನಾಥ ಪೂಜಾರಿ, ಸೀತಾನದಿ ಚಂದ್ರಶೇಖರ ಶೆಟ್ಟಿ, ಹರೀಶ್ ಪೂಜಾರಿ, ತಾರಾನಾಥ ಬಂಗೇರ, ವಿಜಯ ಪೂಜಾರಿ ಮೊದಲಾದವರು ಭಾಗವಹಿಸಿದ್ದರು.




