ಸಮಾಜದಲ್ಲಿ ಗಾಂಧೀಜಿಯವರ ತತ್ವಗಳು, ಮೌಲ್ಯಗಳು ಕಣ್ಮರೆ : ಪ್ರೊ. ಜಿ. ಬಿ. ಶಿವರಾಜು ವಿಷಾದ
ಮುನಿಯಾಲು : ಸಮಾಜದಲ್ಲಿ ಗಾಂಧೀಜಿಯವರ ತತ್ವಗಳು, ಮೌಲ್ಯಗಳು ಕಣ್ಮರೆಯಾಗುತ್ತಿರುದು ವಿಷಾದದ ಸಂಗತಿ. ಜಗತ್ತಿನ ಅನೇಕ ದಾರ್ಶನಿಕರು, ಚಿಂತಕರು ಗಾಂಧೀಜಿಯವರ ಬಗೆಗೆ ಅತ್ಯುತ್ತಮ ಅಭಿಪ್ರಾಯಗಳನ್ನು ಹೊಂದಿದ್ದರು. ಗಾಂಧೀಜಿಯವರ ಶಾಂತಿ ಮತ್ತು ಅಹಿಂಸೆ ಇಂದಿನ ಜಗತ್ತನ್ನು ಸಂರಕ್ಷಿಸುವ ಅಸ್ತ್ರಗಳು. ‘ನಾವು ಹೊಸದೇನನ್ನು ಹೇಳುವ ಅಗತ್ಯವಿಲ್ಲ. ಹೇಳಲೂ ಏನೂ ಉಳಿದಿಲ್ಲ. ಎಲ್ಲವನ್ನು ಈಗಾಗಲೇ ಅನೇಕ ದಾರ್ಶನಿಕರು ಹೇಳಿ ಹೋಗಿದ್ದಾರೆ. ಅವರು ಹೇಳಿದ ಹಾಗೆ ನಾವು ಬದುಕಿದರೆ ಸಾಕು’ ಎಂದು ಬೆಂಗಳೂರಿನ ಗಾಂಧಿಭವನದ ಸಲಹೆಗಾರರಾದ ಪ್ರೊ. ಜಿ. ಬಿ. ಶಿವರಾಜು ಹೇಳಿದರು.
ಅವರು ಮುನಿಯಾಲು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಳ್ವಾಸ್ ಕೃಷಿ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆ ಮಿಜಾರು – ಮೂಡುಬಿದರೆ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುನಿಯಾಲು ರಾಷ್ಟ್ರೀಯ ಸೇವಾ ಯೋಜನೆ ಘಟಕ- ಸಹಯೋಗದೊಂದಿಗೆ ‘ಗಾಂಧಿ- ಯುವಜನತೆ ಮತ್ತು ರಾಷ್ಟ್ರೀಯ ಸೇವಾ ಯೋಜನೆ’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಳ್ವಾಸ್ ಕೃಷಿ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ವಿದ್ಯಾರ್ಥಿಗಳು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುನಿಯಾಲು, ಹೆಬ್ರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮುನಿಯಾಲಿನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಆಗಮಿಸಿದ್ದರು.
ಗಾಂಧಿವಾದಿಗಳಾಗಿ ಗಾಂಧಿ ತತ್ವಗಳಿಂದ ತಮ್ಮನ್ನು ತುಂಬಾ ಪ್ರಭಾವಿಸಿದ ಪ್ರೊ. ಜಿ. ಬಿ. ಶಿವರಾಜು ಅವರನ್ನು
ಆಳ್ವಾಸ್ ಕೃಷಿ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ಡೀನ್ ಡಾ.ವಾಸುದೇವನ್ ಪರಿಚಯಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮುನಿಯಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸುಧಾಕರ ಕೆ.ಜಿ ಮಾತನಾಡಿ ಗಾಂಧೀಜಿಯವರ ಮೌಲ್ಯಗಳು ಇಂದಿಗೂ ಎಂದೆಂದಿಗೂ ಪ್ರಸ್ತುತ. ಗಾಂಧೀಜಿಯವರು ಕೇವಲ ಒಬ್ಬ ವ್ಯಕ್ತಿಯಲ್ಲ. ಅವರು ಶಾಂತಿ ಅಹಿಂಸೆಯ ದ್ಯೋತಕವಾಗಿದ್ದರು. ಈ ಕಾಲಘಟ್ಟಕ್ಕಂತೂ ಗಾಂಧೀಜಿಯವರು ತುಂಬಾ ಅನಿವಾರ್ಯ ಆಗುತ್ತಾರೆ, ಗಾಂಧೀಜಿಯವರ ತತ್ವಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ತಾಲ್ಲೂಕು ಬೋರ್ಡ್ ಸದಸ್ಯ ಪುಟ್ಟರಾಜು, ಕಸ್ತೂರ ಬಾ ಸಂಸ್ಥೆಯ ಸದಸ್ಯ ರವಿಶಂಕರ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ವಿಶ್ವೇಶ್ವರ ಎನ್ ಗಾಂವ್ಕರ್, ಐಕ್ಯೂಎಸಿ ಸಂಚಾಲಕಿ ಝೈಬುನ್ನಿಸಾ ಅಬ್ದುಲ್ ರಜಾಕ್ ಹಮ್ಮಬ್ಬ, ಸಹ ಪ್ರಾಧ್ಯಾಪಕಿ ಡಾ. ಶ್ರೀಮಣಿ, ಶ್ಯಾಮಲ, ಸಹಾಯಕ ಪ್ರಾಧ್ಯಾಪಕರಾದ ಡಾ. ಆನಂದ್ ಕುಮಾರ್. ಜಿ, ಬಿಂದು. ಎ, ಪೂರ್ಣಿಮ, ನಂದಿನಿ, ಶೈಲಜ, ನವೀನ್ ನಾಯಕ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆಯ ಸಂಚಾಲಕ ದೇವರಾಜು. ಕೆ ನಿರೂಪಿಸಿದರು. ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ತೃಪ್ತಿ ಸ್ವಾಗತಿಸಿದರು. ಆಳ್ವಾಸ್ ಕೃಷಿ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆಯ ಸಂಚಾಲಕ ಡಾ. ಸಚಿನ್ ವಂದಿಸಿದರು.




