ಸೀತಾನದಿ ವಿಠಲ ಶೆಟ್ಟಿ – ನಿವೃತ್ತ ಶಿಕ್ಷಕಿ ಶ್ಯಾಮಲಾ ವಿ. ಶೆಟ್ಟಿ ದಂಪತಿಗೆ ಗೌರವಾರ್ಪಣೆ.
ಹೆಬ್ರಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಹೆಬ್ರಿ ತಾಲ್ಲೂಕು ಘಟಕದ ಜಂಟಿ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ‘ಗುರು ಗೌರವಾರ್ಪಣೆ – ೨೦೨೬’ ಕಾರ್ಯಕ್ರಮವ ಶನಿವಾರ ಹೆಬ್ರಿಯ ಅನಂತ ನಗರದಲ್ಲಿ ನಡೆಯಿತು.
ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಕೊಡುಗೆ ನೀಡಿದ ಉಡುಪಿ ಜಿಲ್ಲೆಯ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಸೀತಾನದಿ ವಿಠಲ ಶೆಟ್ಟಿ ಹಾಗೂ ಹೆಬ್ರಿಯ ನಿವೃತ್ತ ಶಿಕ್ಷಕಿ ಶ್ಯಾಮಲಾ ವಿ. ಶೆಟ್ಟಿ ದಂಪತಿಗಳನ್ನು ಈ ಶುಭ ಸಂದರ್ಭದಲ್ಲಿ ಸನ್ಮಾನಿಸಿ, ಅಭಿನಂದಿಸಲಾಯಿತು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಅವರು ಆಶಯ ನುಡಿಗಳನ್ನು ಆಡಿ “ಇಂದಿನ ಈ ಗುರು ಗೌರವಾರ್ಪಣೆ ಕಾರ್ಯಕ್ರಮವು ಶೈಕ್ಷಣಿಕ ಕ್ಷೇತ್ರಕ್ಕೆ ಶ್ರಮಿಸಿದ ಮಹನೀಯರಿಗೆ ನೀಡಿದ ಒಂದು ಮಾದರಿ ಗೌರವವಾಗಿದೆ” ಎಂದು ಶ್ಲಾಘಿಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ಸೀತಾನದಿ ವಿಠಲ ಶೆಟ್ಟಿಯವರು “ಉತ್ತಮ ಮನಸ್ಸಿನಿಂದ ಸಮಾಜ ಮತ್ತು ಸಾಹಿತ್ಯ ಪರಿಷತ್ತು ನೀಡಿದ ಗುರು ಗೌರವವನ್ನು ಸ್ವೀಕರಿಸಿದ್ದೇನೆ. ಅಭಿಮಾನ ಪ್ರೀತಿಗೆ ಧನ್ಯವಾದ ತಿಳಿಸಿ ತಮ್ಮ ಶೈಕ್ಷಣಿಕ ಮತ್ತು ವೃತ್ತಿ ಜೀವನದ ನೆನಪುಗಳನ್ನು ಬಿಚ್ಚಿಟ್ಟು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗುರು ಪರಂಪರೆಯ ಮಹತ್ವ ಹಾಗೂ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರವನ್ನು ಸ್ಮರಿಸಿದರು.ನಿವೃತ್ತ ಅಧ್ಯಾಪಕ ಶಿವರಾಮ ಶೆಟ್ಟಿ ಹಾಗೂ ಉದ್ಯಮಿ ಹರ್ಷ ಶೆಟ್ಟಿ ಅವರು ವಿಠ್ಠಲ ಶೆಟ್ಟಿ ದಂಪತಿಗಳ ಸೇವಾ ನಿಷ್ಠೆಯನ್ನು ಸ್ಮರಿಸಿದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಹೆಬ್ರಿಯ ಉದ್ಯಮಿ ಯೋಗೀಶ ಭಟ್, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕೋಶಾಧ್ಯಕ್ಷ ಪಿ. ಮನೋಹರ್ ಹಾಗೂ ನರಸಿಂಹಮೂರ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಮಂಜುನಾಥ ಕೆ. ಶಿವಪುರ ನಿರೂಪಿಸಿ ಪದಾಧಿಕಾರಿ ಶೈಲಜಾ ಶಿವಪುರ ಪ್ರಾರ್ಥನೆ ಮಾಡಿದರು, ಪದಾಧಿಕಾರಿ ಬಾಲಚಂದ್ರ ಹೆಬ್ಬಾರ್ ಸ್ವಾಗತಿಸಿದರು. ಪದಾಧಿಕಾರಿ ಮಹೇಶ ಹೈಕಾಡಿ ಸನ್ಮಾನ ಪತ್ರವನ್ನು ವಾಚಿಸಿದರು. ಪದಾಧಿಕಾರಿ ಪ್ರೀತೇಶ ಕುಮಾರ್ ವಂದಿಸಿದರು.
ಹೆಬ್ರಿಯ ಪ್ರಮುಖರು, ವಿವಿಧ ಸಂಘಸಂಸ್ಥೆಯ ಪದಾಧಿಕಾರಿಗಳು, ಅಭಿಮಾನಿಗಳು, ಹೆಬ್ರಿ ಅನಂತ ನಗರದ ನಿವಾಸಿಗಳು ಆಗಮಿಸಿದ್ದರು.




