Sunday, November 8, 2026
Homeಕಾರ್ಕಳಹೊಸ ಕೈಗಾರಿಕೋದ್ಯಮಗಳ ಸ್ಥಾಪನೆಗೆ ಮುಂದೆ ಬರುವ ಉದ್ಯಮಿಗಳಿಗೆ ಮೂಲಸೌಕರ್ಯ ಒದಗಿಸಿ.

ಹೊಸ ಕೈಗಾರಿಕೋದ್ಯಮಗಳ ಸ್ಥಾಪನೆಗೆ ಮುಂದೆ ಬರುವ ಉದ್ಯಮಿಗಳಿಗೆ ಮೂಲಸೌಕರ್ಯ ಒದಗಿಸಿ.

 

ಶಿವಪುರದಲ್ಲಿ 74.84 ಎಕ್ರೆ, ಕೆರೆಬೆಟ್ಟುವಿನಲ್ಲಿ 38.75 ಎಕ್ರೆ, ಕಾರ್ಕಳದ ನಿಟ್ಟೆಯಲ್ಲಿ 50.42 ಎಕ್ರೆ ಹಾಗೂ ಬ್ರಹ್ಮಾವರ ತಾಲೂಕಿನ ಉಪ್ಪೂರು 101.19 ಎಕ್ರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣ.

 : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

 

 

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಉದ್ಯಮಗಳನ್ನು ಸ್ಥಾಪಿಸಲು ಉದ್ಯಮಿಗಳು ಮುಂದೆ ಬರುತ್ತಿದ್ದಾರೆ. ಅವರಿಗೆ ಕೈಗಾರಿಕಾ ಪ್ರದೇಶದಲ್ಲಿ ನಿವೇಶನ ಸೇರಿದಂತೆ ಮತ್ತಿತರ ಅಗತ್ಯ ಮೂಲಭೂತ ಸೌಕರ್ಯಗಳು, ಸಲಹೆಗಳನ್ನು ನೀಡಿ, ಉದ್ಯೋಗ ಅವಕಾಶಗಳು ಹೆಚ್ಚಿಸುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು.

ಅವರು  ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಹಾಗೂ ಕೈಗಾರಿಕಾ ಸ್ಪಂದನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಹೆಬ್ರಿ ತಾಲೂಕಿನ ಶಿವಪುರದಲ್ಲಿ 74.84 ಎಕ್ರೆ, ಕೆರೆಬೆಟ್ಟುವಿನಲ್ಲಿ 38.75 ಎಕ್ರೆ, ಕಾರ್ಕಳದ ನಿಟ್ಟೆಯಲ್ಲಿ 50.42 ಎಕ್ರೆ ಹಾಗೂ ಬ್ರಹ್ಮಾವರ ತಾಲೂಕಿನ ಉಪ್ಪೂರು 101.19 ಎಕ್ರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡಲು ಭೂ ಸ್ವಾಧೀನ ಸೇರಿದಂತೆ ಮತ್ತಿತರ ಪ್ರಕ್ರಿಯೆಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ, ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಬೇಕು ಎಂದರು.

ಜಿಲ್ಲೆಯಲ್ಲಿ ಕೈಗಾರಿಕಾ ಘಟಕ ಸ್ಥಾಪನೆಗೆ ನಿವೇಶನ ಹಂಚಿಕೆಯನ್ನು ಮಾಡಿದ್ದರೂ ಸಹ ಕಳೆದ ಸಭೆಯಲ್ಲಿ 17 ನಿವೇಶನಗಳಲ್ಲಿ ಉದ್ದಿಮೆ ಪ್ರಾರಂಭಿಸಲು ಉದ್ದಿಮೆದಾರರಿಗೆ ಸೂಚಿಸಲಾಗಿತ್ತು. ಅವುಗಳಲ್ಲಿ 5 ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿರೆ, 9 ನಿವೇಶನಗಳಲ್ಲಿ ಕಟ್ಟಡಗಳ ನಿರ್ಮಾಣ ಹಂತದಲ್ಲಿರುತ್ತವೆ. ಬಾಕಿ ಉಳಿದ 3 ನಿವೇಶನದಲ್ಲಿ ಯಾವುದೇ ಪ್ರಗತಿ ಕಂಡುಬಂದಿರುವುದಿಲ್ಲ. ಈಗಾಗಲೇ 15 ಕ್ಕೂ ಹೆಚ್ಚು ಜನರು ನಿವೇಶನ ಕೋರುತ್ತಿದ್ದಾರೆ. ನಿವೇಶನ ಪಡೆದು ಕೈಗಾರಿಕಾ ಘಟಕ ಸ್ಥಾಪಿಸದೇ ಇರುವ ನಿವೇಶನಗಳ ಮರು ಹಂಚಿಕೆಗೆ ನಿಯಮಾನುಸಾರ ಕ್ರಮ ಕೈಗೊಳ್ಳಿ ಎಂದರು.

ಕಳೆದ ಸಭೆಯಲ್ಲಿ ಕೈಗಾರಿಕಾ ಘಟಕಗಳಲ್ಲಿ ವೃತ್ತಿಯನ್ನು ಕೈಗೊಳ್ಳಲು ಅವಶ್ಯವಿರುವ ವೃತ್ತಿಪರ ಕೌಶಲ್ಯ ತರಬೇತಿಗಳನ್ನು, ಕೈಗಾರಿಕಾ ತರಬೇತಿ ಸಂಸ್ಥೆಗಳು ಯುವಜನರಿಗೆ ನೀಡುವ ಸಲುವಾಗಿ ಚರ್ಚಿಸಿ ಕ್ರಮ ಕೈಗೊಳ್ಳಲು ತಿಳಿಸಲಾಗಿದ್ದರೂ ಸಹ, ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಯಾವುದೇ ರೀತಿಯ ಕ್ರಮವಹಿಸದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಕೂಡಲೇ ಕ್ರಮ ವಹಿಸುವಂತೆ ಸೂಚಿಸಿದರು.

ಡಾ. ಸರೋಜಿನಿ ಮಹಿಷಿ ವರದಿಯಂತೆ ಕೈಗಾರಿಕಾ ಘಟಕಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕೆಂಬ ಆದೇಶವಿದ್ದು, ಅದರಂತೆ ಜಿಲ್ಲೆಯಲ್ಲಿ 38 ಸಣ್ಣ ಪ್ರಮಾಣದ ಕೈಗಾರಿಕೆಗಳು, 47 ಮಧ್ಯಮ ಪ್ರಮಾಣದ ಕೈಗಾರಿಕೆಗಳು ಹಾಗೂ 7 ಬೃಹತ್ ಕೈಗಾರಿಕೆಗಳು ಸೇರಿದಂತೆ ಒಟ್ಟು 92 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಎ-ವರ್ಗದಲ್ಲಿ 292, ಬಿ-ವರ್ಗದಲ್ಲಿ 1,840, ಸಿ-ವರ್ಗದಲ್ಲಿ 5,329 ಹಾಗೂ ಡಿ ವರ್ಗದಲ್ಲಿ 12,111 ಸೇರಿದಂತೆ ಒಟ್ಟು 19,572 ಕನ್ನಡಿಗರನ್ನು ನೇಮಿಸಿ, ಶೇ. 91.42 ರಷ್ಟು ಉದ್ಯೋಗ ಕಲ್ಪಿಸಲಾಗಿದೆ ಎಂದರು.

ಕೈಗಾರಿಕಾ ಪ್ರದೇಶಗಳಲ್ಲಿ ಅಗತ್ಯವಿರುವ ರಸ್ತೆ, ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಒಳಚರಂಡಿ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದ ಅವರು, ಜಿಲ್ಲೆಯಲ್ಗಿ ವಿವಿಧ ಕೈಗಾರಿಕಾ ಘಟಕಗಳಲ್ಲಿ ಫಿಟ್ಟರ್, ಎಲೆಕ್ಟ್ರೀಷಿಯನ್, ವೆಲ್ಡರ್, ಮೆಕ್ಯಾನಿಕಲ್ ಸೇರಿದಂತೆ ಮತ್ತಿತರ 484 ಹುದ್ದೆಗಳು ಖಾಲಿ ಇರುವುದು ಕಂಡು ಬಂದಿದೆ. ಖಾಲಿ ಹುದ್ದೆಗಳ ನೇಮಕಾತಿಗೆ ಸ್ಥಳೀಯ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡಲು ಕಾರ್ಯಪ್ರವೃತ್ತರಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ ನಾಯಕ್, ಉಪನಿರ್ದೇಶಕ ಜಿ. ವಾಮನ ನಾಯ್ಕ್, ಸಣ್ಣ ಕೈಗಾರಿಕಾ ಸಂಘದ ಜಿಲ್ಲಾ ಅಧ್ಯಕ್ಷ ವಸಂತ ಕಿಣಿ, ಕಾಸಿಯಾ ಪ್ರತಿನಿಧಿ ಹರೀಶ್ ಕುಂದರ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ಜಿಲ್ಲೆಯ ಸಣ್ಣ ಕೈಗಾರಿಕಾ ಉದ್ದಿಮೆದಾರರು ಹಾಗೂ ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

 

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!