ಹೆಬ್ರಿ : ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪಿಯು ಕಾಲೇಜು ವತಿಯಿಂದ 2027-28ನೇ ಶೈಕ್ಷಣಿಕ ಸಾಲಿನ ಪ್ರಯುಕ್ತ 10ನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಮೊದಲ ಹಂತದ ಉಚಿತ ಶಿಕ್ಷಣ ಪ್ರವೇಶ ಪರೀಕ್ಷೆ (Free Education Scholarship Entrance Exam) ಯಶಸ್ವಿಯಾಗಿ ಜರುಗಿತು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಉಚಿತ ಶಿಕ್ಷಣ ನೀಡುವುದು ಮತ್ತು KCET, NEET, JEE, NDA, CSEET, CA FOUNDATION ಮುಂತಾದ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭದ್ರ ಅಡಿಪಾಯ ಹಾಕುವುದು ಈ ಪರೀಕ್ಷೆಯ ಮುಖ್ಯ ಉದ್ದೇಶವಾಗಿತ್ತು. State, CBSE ಮತ್ತು ICSE ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪ್ರಶ್ನೆಪತ್ರಿಕೆ (80 MCQs, ಗಣಿತ ಮತ್ತು ವಿಜ್ಞಾನ) ನೀಡಲಾಗಿತ್ತು.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಶಾಲೆಗಳಿಂದ ಸುಮಾರು 600ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪರೀಕ್ಷೆಯ ಬಳಿಕ ವಿದ್ಯಾರ್ಥಿಗಳನ್ನು ಕಾಲೇಜಿನ ಸುಸಜ್ಜಿತ ಪ್ರಯೋಗಾಲಯಗಳಿಗೆ ಕರೆದೊಯ್ದು Physics, Chemistry ಮತ್ತು Biology ವಿಷಯಗಳ ಜೀವಂತ ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳನ್ನು ತೋರಿಸಿಕೊಡಲಾಯಿತು. ಕಾಲೇಜಿನ ಮೂಲಸೌಕರ್ಯ ಮತ್ತು ಬೋಧನಾ ಗುಣಮಟ್ಟ ಕಂಡು ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಹಿತಿ ಸಭೆಯಲ್ಲಿ ಅಮೃತ ಭಾರತಿ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಹೆಬ್ರಿ ಸತೀಶ್ ಪೈ ಸಂಸ್ಥೆಯು ಹಣದ ಉದ್ದೇಶವಿಲ್ಲದೆ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಮಾಡುತ್ತಿರುವ ಸೇವಾ ಕಾರ್ಯಗಳ ಬಗ್ಗೆ ತಿಳಿಸಿದರು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಶ್ ನಾಯಕ್ ಕಾಲೇಜಿನ ಶಿಸ್ತು, ಸಂಸ್ಕಾರಯುತ ಶಿಕ್ಷಣ ಹಾಸ್ಟೆಲ್ ಸೌಲಭ್ಯದ ಬಗ್ಗೆ ವಿವರಿಸಿದರು.
ಪ್ರಾಂಶುಪಾಲ ಪ್ರಕಾಶ್ ಜೋಗಿ 100% ಉಚಿತ ಶಿಕ್ಷಣ ಯೋಜನೆಯ ಸದುಪಯೋಗ ಹಾಗೂ ಸಂಸ್ಥೆಯ ವಿವಿಧ ವಿದ್ಯಾರ್ಥಿವೇತನದ ಅನುಕೂಲ ಪಡೆದುಕೊಳ್ಳುವಂತೆ ತಿಳಿಸಿ ಕಾಲೇಜಿನಲ್ಲಿ ಲಭ್ಯವಿರುವ ವಿಜ್ಞಾನ, ವಾಣಿಜ್ಯ ಮತ್ತು ಸ್ಪರ್ಧಾತ್ಮಕ ತರಬೇತಿಯ ಸಂಪೂರ್ಣ ಮಾಹಿತಿ ನೀಡಿದರು. ಮೊದಲ ಹಂತದಲ್ಲಿ ಭಾಗವಹಿಸಲು ಸಾಧ್ಯವಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎರಡನೇ ಹಂತದ ಪರೀಕ್ಷೆಯನ್ನು ನವಂಬರ್ ೦೧ ರಂದು ನಡೆಸಲಾಗುವುದು ಎಂದು ತಿಳಿಸಿದರು.
ಅಮೃತ ಭಾರತಿ ಸಮೂಹ ಸಂಸ್ಥೆಗಳ ಮೇಲ್ವಿಚಾರಕ ವಿಜಯ ಕುಮಾರ್ ಶೆಟ್ಟಿ, ಭೋಧಕರು ಉಪಸ್ಥಿತರಿದ್ದರು. ಕನ್ನಡ ಭಾಷಾ ಉಪನ್ಯಾಸಕ ವೀಣೇಶ್ ಅಮೀನ್ ನಿರೂಪಿಸಿದರು.



