ಇಂದಿರಾ ಗಾಂಧಿ ಅವರು ದೇಶದ ಅಖಂಡತೆಗಾಗಿ ಗಟ್ಟಿ ನಿರ್ದಾರ ತೆಗೆದುಕೊಂಡಿದ್ದರು : ಶುಭದಾ ರಾವ್.
ಕಾರ್ಕಳ : ಭಾರತದ ಮಾಜಿ ಪ್ರಧಾನಿ ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿದ್ದ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆಯನ್ನು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗೌರವಪೂರ್ವಕವಾಗಿ ಆಚರಿಸಲಾಯಿತು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾದ್ಯಕ್ಷೆ ಮಾಲಿನಿ ರೈ ಅವರು ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ದೀಪ ಪ್ರಜಲಿಸಿದ ನಂತರ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದಾ ರಾವ್ ಅವರು, ಇಂದಿರಾ ಗಾಂಧಿ ಅವರು ದೇಶದ ಅಖಂಡತೆಗಾಗಿ ಗಟ್ಟಿ ನಿರ್ದಾರ ತೆಗೆದುಕೊಂಡಿದ್ದರು, ಪಂಜಾಬ್ ಅನ್ನು ಭಾರತದಿಂದ ಬೇರ್ಪಡಿಸಿ ಖಲಿಸ್ತಾನ ನಿರ್ಮಾಣ ಮಾಡಲು ಹೊರಟ ವಿಭಜನಾವಾದಿಗಳ ವಿರುದ್ದ ಗಟ್ಟಿ ನಿರ್ದಾರ ತೆಗೆದುಕೊಂಡ ಪರಿಣಾಮ ಇಂದಿರಾ ಗಾಂಧಿ ಹುತಾತ್ಮರಾಗಬೇಕಾಯಿತು. ಯಾವಾಗ ಇಂದಿರಾ ಗಾಂಧಿಯವರ ಉಳುವವನೇ ಹೊಲದೊಡೆಯ ಕಾನೂನು ತಂದರೋ ಆಗ ನಾವೆಲ್ಲರೂ ಸ್ವಾಭಿಮಾನದ ಜೀವನ ನಡೆಸುವಂತಾಯಿತು. ಕೇವಲ ಪುಣ್ಯಸ್ಮರಣೆಯಂದು ಇಂದಿರಾಗಾಂಧಿಯವರ ಸ್ಮರಣೆ ಮಾಡೊದಲ್ಲ, ಯಾವಾಗೆಲ್ಲಾ ನಾವು ಗದ್ದೆಗೆ ಕಾಲಿಡುತ್ತೇವೋ ಆವಗೆಲ್ಲಾ ಇಂದಿರಾ ಗಾಂಧಿಯವರನ್ನು ನಾವು ಸ್ಮರಣೆ ಮಾಡಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರ ಪಾಲ್ ನಕ್ರೆ ಅವರು ಮಾತನಾಡಿ, ಭೂಮಸೂದೆ ಮೂಲಕ ಭೂಮಿ ಪಡೆದುಕೊಂಡವರು ಇಂದು ಇಂದಿರಾ ಗಾಂಧಿಯನ್ನು ಮರೆತಿರುವುದು ವಿಪರ್ಯಾ ಎಂದರು, ಇಂದಿರಾ ಗಾಂಧಿ ಅವರ ರಾಜಕೀಯ ಜೀವನ, ದೇಶದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಹಾಗೂ ಅವರ ದಿಟ್ಟ ನಿರ್ಧಾರಗಳನ್ನು ಸ್ಮರಿಸಿದರು. ಬ್ಲಾಕ್ ಉಪಾಧ್ಯಕ್ಷ ಜಾರ್ಜ್ ಕ್ಯಾಸ್ತಲಿನೊ, ಪುರಸಭಾ ನಿವೃತ್ತ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಪ್ರಭಾಕರ ಬಂಗೇರ ಮಾತನಾಡಿದರು.
ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ ಪೂಜಾರಿ ಸ್ವಾಗತಿಸಿದರು, ವಕ್ತಾರ ಪ್ರದೀಪ್ ಬೇಲಾಡಿ ನಿರೂಪಿಸಿದರು. ರೀನಾ ಟೀಚರ್ ನಕ್ರೆ ಧನ್ಯವಾದವಿತ್ತರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಬ್ಲಾಕ್ ಪದಾಧಿಕಾರಿಗಳು, ಘಟಕದ ಅಧ್ಯಕ್ಷರು, ಗ್ರಾಮೀಣ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



