Sunday, November 8, 2026
Homeಪ್ರಮುಖ ಸುದ್ದಿಭೂಗತ ಪಾತಕಿ ಹೇಮಂತ್‌ ಪೂಜಾರಿ ಹೆಸರಿನಲ್ಲಿ ಉದ್ಯಮಿಗಳಿಗೆ ಕೋಟ್ಯಾಂತರ ರೂಪಾಯಿ ಹಣಕ್ಕೆ ಬೇಡಿಕೆ : ಸಹಕರಿಸಿದ...

ಭೂಗತ ಪಾತಕಿ ಹೇಮಂತ್‌ ಪೂಜಾರಿ ಹೆಸರಿನಲ್ಲಿ ಉದ್ಯಮಿಗಳಿಗೆ ಕೋಟ್ಯಾಂತರ ರೂಪಾಯಿ ಹಣಕ್ಕೆ ಬೇಡಿಕೆ : ಸಹಕರಿಸಿದ ಆರೋಪಿ ಬಂಧನ.

2 ಮೊಬೈಲ್‌ ಪೋನ್‌ ವಶ : ಶ್ರೀಮಂತ ಉದ್ಯಮಿಗಳ ಮೊಬೈಲ್‌ ನಂಬ್ರ ನೀಡಿದ ಆರೋಪ.

ಉಡುಪಿ : ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಉಡುಪಿ ಜಿಲ್ಲೆಯ ಉದ್ಯಮಿಗಳಿಗೆ ಅಂತರರಾಷ್ಟ್ರೀಯ ಮೊಬೈಲ್ ನಂಬರ್ಗಳಿಂದ ಕರೆ ಮಾಡಿ ಕೋಟ್ಯಂತರ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟು, ಹಣ ನೀಡದಿದ್ದಲ್ಲಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮುದರಂಗಡಿ ಡೇವಿಡ್ ಡಿಸೋಜಾ ಅವರ ಕೋಲೆಯ ಬಳಿಕ ಹೇಮಂತ್ ಪೂಜಾರಿ ಪಡುಬಿದ್ರಿ, ಮಣಿಪಾಲ, ಕಾಪು ಹಾಗೂ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯವಹಾರ ನಡೆಸುತ್ತಿರುವ ಉದ್ಯಮಿಗಳನ್ನು ಗುರಿಯಾಗಿಸಿಕೊಂಡಿದ್ದ. ಅಂತರರಾಷ್ಟ್ರೀಯ ನಂಬರ್‌ಗಳಿಂದ ಕರೆ ಮಾಡಿ ಕೋಟ್ಯಂತರ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದಲ್ಲದೆ, ಹಣ ನೀಡದಿದ್ದರೆ ಈ ಹಿಂದೆ ಶಿರ್ವದಲ್ಲಿ ಕೊಲೆಯಾಗಿದ್ದ ಡೇವಿಡ್ ಡಿಸೋಜಾ ಅವರ ರೀತಿಯಲ್ಲೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈ ಸಂಬಂಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು ಎಂಟು ಪ್ರಕರಣಗಳು ದಾಖಲಾಗಿದ್ದವು.

ಈ ಪೈಕಿ ಶಿರ್ವ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಹೇಮಂತ್ ಪೂಜಾರಿಗೆ ಶ್ರೀಮಂತ ಉದ್ಯಮಿಗಳ ಮೊಬೈಲ್ ನಂಬರ್‌ಗಳನ್ನು ಒದಗಿಸಿ ಕೃತ್ಯಕ್ಕೆ ಸಹಕರಿಸಿದ್ದ ಸಾಂತೂರು ಗ್ರಾಮದ ಹರೀಶ್ ಪೂಜಾರಿ (45) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ಪಿರ್ಯಾದಿದಾರರ ಮೊಬೈಲ್ ನಂಬರ್‌ಗಳನ್ನು ಹೇಮಂತ್ ಪೂಜಾರಿಗೆ ನೀಡುವ ಮೂಲಕ ಕೃತ್ಯಕ್ಕೆ ಸಹಕರಿಸಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಎರಡು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ, ಬಳಿಕ ಬಂಧಿತ ಆರೋಪಿ ಹರೀಶ ಪೂಜಾರಿಯನ್ನು ನ್ಯಾಯಲಯಕ್ಕೆ ಹಾಜರು ಪಡಿಸಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!