ಮುದ್ರಾಡಿ : ಕ್ರೀಡೆಗಳು ಮೈಮನಗಳ ದಣಿವನ್ನು ನಿವಾರಿಸುವ ಕ್ರಿಯೆಗಳು. ಸ್ವಸ್ಥ ಶರೀರವನ್ನು ಹೊಂದಲು ಆಟೋಟಗಳಲ್ಲಿ ಭಾಗವಹಿಸುವುದು ಅಗತ್ಯ. ಇಲ್ಲಿ ಕಲಿತ ಸೋಲು- ಗೆಲುವುಗಳು, ಏಕಾಗ್ರತೆ, ಶಿಸ್ತು, ಸಂಯಮಗಳು, ನಾಯಕತ್ವ ಗುಣ ನಮ್ಮ ಮುಂದಿನ ಬದುಕಿನ ಸವಾಲುಗಳನ್ನು ಎದುರಿಸಲು ದಾರಿದೀಪಗಳಾಗುತ್ತದೆ. ಅಂತೆಯೇ ಕ್ರೀಡೆಯಲ್ಲಿ ಉನ್ನತ ಸಾಧನೆ ಸಾಧಿಸಿದರೆ ವಿದ್ಯಾಭ್ಯಾಸ ಹಾಗೂ ನೌಕರಿಗಳಲ್ಲಿ ಕೂಡಾ ಮೀಸಲಾತಿ ಸಿಗುತ್ತದೆ. ಸಮಯ ವ್ಯರ್ಥ ಮಾಡುವುದಕ್ಕಾಗಿ ಕ್ರೀಡೆಗಳಲ್ಲಿ ಆಡದೆ,ಸ್ಪಷ್ಟ ಗುರಿ,ಉದ್ದೇಶವನ್ನು ಇಟ್ಟುಕೊಂಡು ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ ಎಂದು ಮುದ್ರಾಡಿಯ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯ ಹಿರಿಯ ಶಿಕ್ಷಕ ಮಹೇಶ ನಾಯ್ಕ ಕೆ. ಹೇಳಿದರು.
ಅವರು ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ನಡೆದ, ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ದೈಹಿಕ ಶಿಕ್ಷಣ ಶಿಕ್ಷಕ ರಘುಪತಿ ಹೆಬ್ಬಾರ್ ಮಾತನಾಡಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ರವರ ಜೀವನ ಪರಿಚಯ ಮತ್ತು ಸಾಧನೆಗಳ ಬಗ್ಗೆ ವಿವರಿಸಿದರು. ಶಿಕ್ಷಕರಾದ ಆನಂದ್ ಪಿ.ವಿ., ಶ್ಯಾಮಲಾ , ಅನುಷಾ , ವಿದ್ಯಾರ್ಥಿ ನಾಯಕ ಪ್ರತೀಕ್ ಹೆಬ್ಬಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಂಜಲಿ ನಿರೂಪಿಸಿ, ಸಿಂಚನಾ ಸ್ವಾಗತಿಸಿ, ಪ್ರಥ್ವಿನ್ ವಂದಿಸಿದರು.



