ಹೆಬ್ರಿ: ಅಮೃತ ಭಾರತಿ ವಿದ್ಯಾ ಕೇಂದ್ರದಲ್ಲಿ “ಸಾಮೂಹಿಕ ರಕ್ಷಾ ಬಂಧನ ಕಾರ್ಯಕ್ರಮ”ವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಗುರುದಾಸ್ ಶೆಣೈ, ವಸತಿ ನಿಲಯ ಸಮಿತಿಯ ಸದಸ್ಯರಾದ ರಾಮಕೃಷ್ಣ ಆಚಾರ್, ಪ್ರಾಂಶುಪಾಲ ಅರುಣ್ ಹೆಚ್.ವೈ., ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಸಂಪ್ರದಾಯಬದ್ಧವಾಗಿ ಸಂಸ್ಥೆಯ ಮಾತಾಜಿಯವರಿಂದ, ಸಿಬ್ಬಂದಿ ವರ್ಗದವರಿಂದ ಅಧ್ಯಕ್ಷರು ಶ್ರೀರಕ್ಷೆಯನ್ನು ಕಟ್ಟಿಸಿಕೊಂಡು ಸಿಹಿ ತಿಂದು ಸಂಭ್ರಮಿಸಿದರು.
ಸಾಮೂಹಿಕ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಸಂಸ್ಥೆಯ ಗುರುಗಳ, ವಾಹನ ಚಾಲಕರು, ಅಡುಗೆ ಸಿಬ್ಬಂದಿ, ಕಚೇರಿ ಸಿಬ್ಬಂದಿ, ಶಾಲಾ ಸಹಾಯಕ-ಸಹಾಯಕಿಯರು, ವಸತಿ ನಿಲಯದ ಮೇಲ್ವಿಚಾರಕರು ಪರಸ್ಪರ ರಕ್ಷೆ ಕಟ್ಟಿ-ಕಟ್ಟಿಸಿಕೊಂಡು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
ಸಂಸ್ಥೆಯ ಸಾವಿರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶ್ರದ್ಧಾ-ಭಕ್ತಿಯಿಂದ ಸಾಮೂಹಿಕ ರಕ್ಷಾ ಬಂಧನದಲ್ಲಿ ಭಾಗವಹಿಸಿ, ರಕ್ಷೆ ಕಟ್ಟಿ-ಕಟ್ಟಿಸಿಕೊಂಡು ಸಿಹಿ ಹಂಚಿ ಸಂತಸಪಟ್ಟರು. ಕಾರ್ಯಕ್ರಮದಲ್ಲಿ ರಕ್ಷಾ ಬಂಧನದ ಸಂದೇಶವನ್ನು ವಾಚಿಸಲಾಯಿತು.
ಅಮೃತ ಭಾರತಿ ವಿದ್ಯಾಲಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ.
ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರಾವಣ ಮಾಸದ ಪೂರ್ಣಿಮೆಯಂದು ಸಹೋದರ – ಸಹೋದರಿ ಸ್ನೇಹ ಸಂಕೇತವಾಗಿ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಅಮೃತ ಭಾರತಿ ವಿದ್ಯಾಕೇಂದ್ರದ ಕನ್ನಡ ಶಿಕ್ಷಕಿ ವಿಮಲಾ ಮಾತನಾಡಿ, ರಕ್ಷಾ ಬಂಧನ ಭಾವನೆಗಳ ಹಬ್ಬ, ವಾತ್ಸಲ್ಯದ ಹಬ್ಬ, ಮೇಲು – ಕೀಳು ಇಲ್ಲದ ಭಾರತೀಯರ ಶ್ರೇಷ್ಠ ಹಬ್ಬ, ಸಂಘಜೀವಿಯಾದ ಮನುಷ್ಯನಿಗೆ ಮಾನವೀಯ ಸಂಬಂಧವನ್ನು ಕಲ್ಪಿಸುವ ಗುರುತರವಾದ ಜವಾಬ್ದಾರಿ ಹಂಚುವ ಹಬ್ಬವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಅಪರ್ಣಾ ಆಚಾರ್, ಶಕುಂತಲಾ, ಸಂಸ್ಥೆಯ ಗುರುವೃಂದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಸ್ಥೆಯ ಶಿಕ್ಷಕಿಯರು ಗುರೂಜಿಯವರಿಗೆ ರಕ್ಷೆಯನ್ನು ಕಟ್ಟಿ ಆಶೀರ್ವಾದ ಪಡೆದರು.
ವಿದ್ಯಾರ್ಥಿಗಳು ಪರಸ್ಪರ ಅರಸಿನ ಕುಂಕುಮ ಹಚ್ಚಿ, ಆರತಿ ಬೆಳಗಿ, ಸಿಹಿ ಹಂಚಿ ಸಂಭ್ರಮಿಸಿದರು. ಹಾಗೆಯೇ ಹೆಬ್ರಿ ನಗರ ಪರಿಸರದಲ್ಲಿ ವಿದ್ಯಾರ್ಥಿಗಳು ರಕ್ಷೆಯನ್ನು ಕಟ್ಟಿದರು. ಕಾರ್ಯಕ್ರಮವನ್ನು ಸಂಸ್ಥೆಯ ವಿದ್ಯಾರ್ಥಿನಿಯರಾದ ಸಮೃದ್ಧಿ ಸ್ವಾಗತಿಸಿ , ಚಿನ್ಮಯಿ ನಿರೂಪಿಸಿ, ಪ್ರಾರ್ಥನಾ ವಂದಿಸಿದರು. ಸಂಸ್ಥೆಯ ಶಿಕ್ಷಕಿ ಸುಚಿತ್ರಾ ರಕ್ಷಾ ಬಂಧನದ ಸಂದೇಶ ವಾಚಿಸಿದರು.





