Wednesday, September 23, 2026
Homeಅಂಕಣಶ್ರೀಕೃಷ್ಣ ಕೇವಲ ದೈವಿ ಸ್ವರೂಪನಲ್ಲ-ದೈನಿಕ ಸ್ವರೂಪ: ಪ್ರಕಾಶ್ ಜೋಗಿ

ಶ್ರೀಕೃಷ್ಣ ಕೇವಲ ದೈವಿ ಸ್ವರೂಪನಲ್ಲ-ದೈನಿಕ ಸ್ವರೂಪ: ಪ್ರಕಾಶ್ ಜೋಗಿ

ಶ್ರೀಕೃಷ್ಣ ಜನ್ಮಾಷ್ಟಮಿಯು ಆಧ್ಯಾತ್ಮಿಕವಾಗಿ ಭಾರತೀಯರಾದ ನಮಗೆ ಶ್ರದ್ಧಾ-ಭಕ್ತಿಯ ಹಬ್ಬವಾಗಿರದೆ, ಒಂದು ಪರಿಪೂರ್ಣ ಜೀವನದ ಪ್ರತಿಫಲನವಾಗಿದೆ . ವಸುದೇವ ಸುತಂ ದೇವಂ ಕಂಸ ಚಾನೂರ ಮರ್ಧನಂ ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರು, ಜಗವಂದ್ಯನು, ಸರ್ವಮಾನ್ಯನು ಆದ ಕೃಷ್ಣನು ಸೆರೆಮನೆ, ನೆರೆಮನೆ,ಅರಮನೆಯ ಜೀವನವು ಎಲ್ಲರಿಗೂ ಸಂದೇಶಮಾಲಿಕ . ಅದಕ್ಕಾಗಿ ಕೃಷ್ಣ ಕೇವಲ ದೈವಿಕ ಸ್ವರೂಪನಲ್ಲ , ದೈನಿಕ ಸ್ವರೂಪ. ಅಂದರೆ ಓರ್ವ ವ್ಯಕ್ತಿಯ ದೈನಂದಿನ ಜೀವನ ಉದಾತ್ತ ಮೌಲ್ಯಗಳಿಂದ ಆದರ್ಶಪ್ರಾಯವಾಗುವುದು ಎಂದರ್ಥ. ಅದನ್ನು ಪುಷ್ಟಿಕರಿಸುವ ಸಣ್ಣ ಪ್ರಯತ್ನ.

ಶ್ರೀಕೃಷ್ಣ ಹುಟ್ಟಿರುವುದು ಸೆರೆಮನೆಯಲ್ಲಿ. ಆದರೆ ಆತನ ಜೀವನ ವಿಧಾನ ಮುಂದೆಂದೂ ಸಮಾಜ ಆತನನ್ನು ಸೆರೆಮನೆಗೆ ಅಟ್ಟುವಂತೆ ನಡೆದುಕೊಂಡಿಲ್ಲ. ಮಾತ್ರವಲ್ಲದೆ ಹುಟ್ಟು ಹೇಗೆ ಇದ್ದರೂ ಇನ್ನೊಬ್ಬರಿಗೆ ಮಾರ್ಗದರ್ಶನ ನೀಡುವ ಬದುಕು ನಮ್ಮದಾಗಬೇಕು ಎನ್ನುವ ನೀತಿ ಅಲ್ಲಿದೆ. ನವನೀತ ಚೋರ, ಮುದ್ದು ಬಾಲಕೃಷ್ಣನ ಬಾಲಲೀಲೆಗಳನ್ನು ಇಷ್ಟಪಡದವರು ಈ ಜಗತ್ತಿನಲ್ಲಿ ಯಾರೂ ಇಲ್ಲ. ಅದರಲ್ಲೂ ಪ್ರತಿಯೊಬ್ಬ ಭಾರತೀಯ ಮಹಿಳೆ ತನಗೆ ಕೃಷ್ಣನಂತಹ ಮುದ್ದು ಕಂದನಿರಬೇಕು ಎಂದು ಖಂಡಿತ ಆಶಿಸುತ್ತಾಳೆ. ಕೃಷ್ಣನಂತ ಚೂಟಿತನ, ಮುಗ್ದತೆ ಎಲ್ಲಾ ತಾಯಂದಿರೂ ಇಷ್ಟಪಡುವ ಸ್ಮಿತವದನ ಎಲ್ಲರ ಮನದ ನೋವನ್ನು ಮರೆಯಾಗಿಸುತ್ತದೆ. ಹುಟ್ಟುವ ಪ್ರತಿಯೊಂದು ಮಗು ಕೃಷ್ಣನಂತೆ ಇರುತ್ತಾನೆ ಆದರೆ ಎಲ್ಲಾ ತಾಯಂದಿರು ದೇವಕಿ- ಯಶೋಧರೆಯ ಹಾಗೆ ಇದ್ದರೆ ಬದುಕು ನಂದಗೋಕುಲವಾಗುತ್ತದೆ. ಆದರೆ ಇಂದು ಕೃಷ್ಣನಂತೆ ಮುದ್ದು ಮಗುವಿರಬೇಕು. ಆದರೆ ಮಕ್ಕಳು ಮಾತ್ರ ಯಾವುದೇ ಬಾಲಲೀಲೆಗಳು ಇರದೇ ರಿಮೋಟ್ ಕಂಟ್ರೋಲ್ ನಂತೆ ನಮ್ಮ ಇಚ್ಛೆಯಂತೆ ಬದುಕಬೇಕು.

ಕೃಷ್ಣ ಬಾಲ್ಯದಲ್ಲಿ ಜಾತಿಭೇದವಿಲ್ಲದೆ ಸಿರಿತನ-ಬಡತನ ಅಂತರವಿಲ್ಲದೆ ಎಲ್ಲರೊಂದಿಗೆ ಸೇರಿ ಆಟವಾಡಿದ ಕುಣಿದಾಡಿದ, ಮಾತ್ರವಲ್ಲದೆ ಆತಂಕ ದೂರ ಮಾಡಿದ. ಕೃಷ್ಣನಂತಹ ಮುದ್ದು-ಮಗು ಅವನಂತಹ ಮುಗ್ಧ-ನಗು, ಎಲ್ಲರೊಂದಿಗೆ ಅರಿತು, ಬೆರೆತು ಬಾಳುವ ಗುಣ ಇಂದಿನ ಮಕ್ಕಳಲ್ಲಿ ನಾವು ಬೆಳೆಸಬೇಕಾಗಿದೆ.

ಇನ್ನು ಸಂಸಾರಿಕ ಹಾಗೂ ನೆರೆಹೊರೆಯ ಸಂಬಂಧಗಳಲ್ಲಿ ಕೃಷ್ಣ ಎಲ್ಲ ರೀತಿಯಲ್ಲೂ ಸಮಕಾಲೀನ ಮಾದರಿ. ಅಣ್ಣನ ಪ್ರೀತಿಯ ತಮ್ಮನಾಗಿ ಬಲರಾಮನೆಗೆ ಸಬಲನಾದರೆ ಜವಾಬ್ದಾರಿಯುತ ಅಣ್ಣನಾಗಿ ದ್ರೌಪದಿ,ಸುಭದ್ರೆಯರಿಗೆ ಅಭಯದ ಮುದ್ರೆ ಒತ್ತುತ್ತಾನೆ. ಕೃಷ್ಣ ಬಲರಾಮರು ಎಲ್ಲಿಯೂ ಎಲ್ಲೆ ಮೀರಿದ ರಾಗ-ದ್ವೇಷಕ್ಕೆ ಒಳಗಾಗದವರು . ಉತ್ತಮ ಸಹೋದರ ಸಂಬಂಧಕ್ಕೆ ಇವರು ಎಂದೆಂದಿಗೂ ಸಾಕ್ಷಿಯಾಗುತ್ತಾರೆ. ಸಂಕಟದಲ್ಲಿ ಸಂಘಡವಿದ್ದು ಸಾಂತ್ವನ ನೀಡುವ ಜವಾಬ್ದಾರಿಯುತ ಅಣ್ಣನಿದ್ದರೆ ಕೃಷ್ಣನಂತೆ ಇರಬೇಕೆಂದು ಎಲ್ಲಾ ಹೆಂಗಳೆಯರು ಬಯಸುವಂತಾಗುತ್ತಾನೆ. ಇಂದು ನಮ್ಮ ಸಮಾಜಕ್ಕೂ ಬೇಕಿರುವುದು ಇಂತಹ ಸಹೋದರರು. ಹುಟ್ಟು-ಹುಟ್ಟುತ್ತ ಸಹೋದರರು ಬೆಳೆಯುತ್ತ ದಾಯಾದಿಗಳು ಎನ್ನುವುದಕ್ಕೆ ಅಪವಾದವೆಂಬಂತೆ ಸಹೋದರರು ಬದುಕಬೇಕೆಂಬುದು ಕೃಷ್ಣ ಸಂದೇಶ. ದ್ರೌಪದಿ ಸುಭದ್ರೆಯರಿಗೆ ದೊರೆತ ಸಹೋದರ ಎಲ್ಲಾ ಹೆಣ್ಣುಮಕ್ಕಳ ಬಾಳಿಗೆ ದೊರೆತರೆ ಅವರ ಬಾಳಿಂಬುದು ನಂದನ ವಾಗುವುದು. ಇಂದು ಎಲ್ಲಾ ಸಹೋದರರು ಕೃಷ್ಣ- ಬಲರಾಮನಂತೆ ಇದ್ದರೆ ಕುಟುಂಬದಲ್ಲಿ ಸಮರಸದ ಬಾಳ್ವೆ ಸಾಗಿಸಬಹುದು.

ಕೃಷ್ಣ, ಪರೋಪಕಾರಿ ಸ್ನೇಹ-ಬಂಧು ಹಾಗೂ ಧರ್ಮಯುಕ್ತ ಗುಣಗಳಿಗೆ ಕೈಗನ್ನಡಿ. ಯದಾ-ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ… ಎನ್ನುವುದು ಕೃಷ್ಣನ ಆಧ್ಯನುಡಿ. ಅಂದರೆ ಎಲ್ಲಿ ಅನ್ಯಾಯ ಅನೀತಿ ಅರಾಜಕತೆ ಕಂಡುಬರುತ್ತದೆ ಅಲ್ಲಿ ಕೃಷ್ಣನು ಇದ್ದು ಸಮಸ್ಯೆಗೆ ಪರಿಹಾರಕನಾಗುತ್ತಾನೆ.
ಹಾಗಾಗಿ ಉತ್ತಮ ಸ್ನೇಹಿತನಾಗಿ ಕೃಷ್ಣ-ಕುಚೇಲ ನಮಗೆ ಮಾದರಿಯಾಗಬೇಕು. ಸ್ನೇಹವನ್ನು ಎಂದೆಂದಿಗೂ ತೊಡುವ ಬಟ್ಟೆಯಿಂದ ಉಣ್ಣುವ ಅನ್ನದಿಂದ ಅಳೆಯದೇ ಶುದ್ಧ ಮನಸ್ಸಿನಿಂದ ಕಾಣುವುದಾಗಬೇಕು. ಕೃಷ್ಣ ಎಲ್ಲ ವರ್ಗದ ಜನರೊಂದಿಗೆ ಬರೆಯುವ, ಬೆರೆಯುವ ಗುಣ ಹೊಂದಿದವನು. ಅರ್ಜುನನಿಗೆ ಉತ್ತಮ ಸ್ನೇಹಿತನಾಗಿ, ಆತ ದಾರಿ ತಪ್ಪಿದಾಗ ಕಿವಿ ಹಿಂಡಿದವನು. ತಾನೋರ್ವ ಬಿಲ್ ವಿದ್ಯೆಯಲ್ಲಿ ಅಪ್ರತಿಮ ಯೋಧ ಎಂದು ಬೀಗುತ್ತಿದ್ದ ಅರ್ಜುನನಿಗೆ ಅವನ ಗರ್ವವನ್ನು ಭಂಗ ಮಾಡಿ ಉದ್ದಾರದ ದಾರಿ ತೋರಿದವನು. ಹಾಗೆ ಸಂಸಾರದ ಮಮಕಾರದಲ್ಲಿ ಧರ್ಮದ ದಾರಿ ಮೆರೆತು ಶಸ್ತ್ರಸನ್ಯಾಸ ದೀಕ್ಷೆ ತೊಡುವವನಿದ್ದ ಅರ್ಜುನನಿಗೆ ಧರ್ಮ ಸಾಕ್ಷಾತ್ಕಾರಗೊಳಿಸಿ, ಕರ್ಮಣ್ಯ ವಾದಿಕಾರಷ್ಟೇ ಮಾಫಲೇಶು ಕದಾಶನ ಎಂದು ಎಚ್ಚರಿಸಿದವನು. ನಮ್ಮ ಜೀವನದಲ್ಲೂ ಕೃಷ್ಣನಂತೆ ತಿದ್ದಿ ಬುದ್ಧಿ ಮಾತು ತಿಳಿ ಹೇಳುವ ಆಪ್ತ ಸ್ನೇಹಿತರು ಬೇಕಾಗಿದ್ದಾರೆ.
ಅಜ್ಞಾನ, ಅಹಂಕಾರದ ಕಾರ್ಮೋಡಗಳ ಸರಿಸಿ ಮಳೆಯ ಸಿಂಚನ ನೀಡಿ, ಧೈರ್ಯ ತುಂಬುವ ಪ್ರಹ್ಲಾದವದನಂತಹ ಕೃಷ್ಣನಂತಹ ಗೆಳೆಯ, ಆಪ್ತಮಿತ್ರ ಪ್ರತಿಯೊಬ್ಬರ ಬಾಳಿನಲ್ಲಿ ಇದ್ದರೆ ಎಂತಹ ಸಮಸ್ಯೆಗೂ ಸೂಜಿಗಲ್ಲಿನ ಪರಿಹಾರ ಸಿಗುವುದು.

ಕೃಷ್ಣ ಓರ್ವ ರಾಜನೀತಿ ತಜ್ಞನು ಹೌದು. ಕೃಷ್ಣ ಎಲ್ಲಿಯೂ ಕೂಡ ರಾಜನಾಗಿ ರಾಜ್ಯಭಾರ ಮಾಡಲಿಲ್ಲ. ಆದರೆ, ರಾಜ್ಯಭಾರ ಮಾಡುವವರಿಗೆ ಧರ್ಮಧಾರಿತ, ನ್ಯಾಯಾಧಾರಿತ ಸಲಹೆಯಿಂದ, ಸಮಸ್ಯೆಯನ್ನು ಬಗೆಹರಿಸುವ ನಿಪುಣ ಕಲೆಯನ್ನು ಅರಿತವನು. ರಾಜ್ಯಕ್ಕೆ ಭಾರವಾಗಿರುವ ಆಡಳಿತದ ಚುಕ್ಕಾಣಿ ಹಿಡಿದವರಿಗೆ ಕಿವಿಹಿಂಡುವಂತೆ ಮಾಡಿರುವ ಕೃಷ್ಣನ ರಾಜನೀತಿ ಇಂದು ನಮಗೆ ಅನಿವಾರ್ಯವಾಗಿದೆ. ಕೌರವರು ನಡೆಯುವ ಹಾದಿ ಕೆಡುಕು ಎಂಬ ಅರಿವಿದ್ದರೂ ಕೃಷ್ಣ-ನೀತಿ ಅವರನ್ನು ಸರಿದಾರಿಗೆ ತರುವ ತನ್ನ ಪ್ರಯತ್ನದಲ್ಲಿ ಸೋಲಲಿಲ್ಲ. ಅಂತೆಯೇ ಧರ್ಮನುಸಾರ ಪಾಲಕರಾದ ಪಾಂಡವರಿಗೆ ಅಭಯ ನೀಡುವುದರ ಜೊತೆಗೆ ಅದರ್ಮದ ಕಡೆಗೆ ಜಾರದಂತೆ ಕಾಪಿಟ್ಟುಕೊಂಡಿರುವುದು ಸುಳ್ಳಲ್ಲ. ಧರ್ಮೋ ರಕ್ಷತಿ ರಕ್ಷಿತಃ ಎಂಬ ವಾಕ್ಯಕ್ಕೆ ಸಮಾನಾರ್ಥಕನಾದವನು ಕೃಷ್ಣ. ಕುರುಕ್ಷೇತ್ರ ಯುದ್ಧದಲ್ಲಿ ಕೇವಲ ಪಾರ್ಥಸಾರಥಿಯಾದನೆ ಹೊರತು ಯುದ್ಧಕ್ಕೆ ಸಾರಥಿ ಆಗಲಿಲ್ಲ. ಹಾಗೆಂದ ಮಾತ್ರಕ್ಕೆ ಮುಂದೆ ಒದಗಬಹುದಾದ ಅನಾಹುತದ ಅಂಕುಶ ಪ್ರಯತ್ನದಿಂದ ಹಿಂದೆ ಸರಿಯಲಿಲ್ಲ ಎನ್ನುವುದು ಕೃಷ್ಣಸಂಧಾನ ಒತ್ತಿ ಹೇಳುತ್ತದೆ. ಪ್ರಸ್ತುತದಲ್ಲಿ ಕೃಷ್ಣನಂತೆ ಧರ್ಮದಾರಿತ, ನ್ಯಾಯಾಧಾರಿತ ಸೃಜನ ಪಕ್ಷಪಾತವಿಲ್ಲದೆ ಅಧಿಕಾರ ದಾಹವಿಲ್ಲದೆ ತಿದ್ದಿ ಹೇಳುವ ಬುದ್ಧಿ ತೋರುವ ಪ್ರಬುದ್ಧ ರಾಜನೀತಿಯ ಅಗತ್ಯವಿದೆ.

ಇನ್ನು ಕಿಶೋರಾವಸ್ಥೆಯಲ್ಲಿ ಉಂಟಾಗುವ ಪ್ರೀತಿ ಪ್ರೇಮಗಳಿಗೆ ಕೃಷ್ಣನಲ್ಲದೆ ಬೇರಾರು ಸರ್ವಕಾಲಿಕ ಉದಾಹರಣೆ ಆಗಲಾರರು. ಕೃಷ್ಣ- ರಾಧೆಯರು ಪ್ರೀತಿ-ಪ್ರೇಮಕ್ಕೆ ಇಂದಿಗೂ ಸಾರ್ವಕಾಲಿಕ ಉದಾಹರಣೆ. ಯಾವ ಜೂಲಿಯಟ್ – ಸೀಸರ್, ಲೈಲಾ-ಮಾಜನು ಕೂಡಾ, ಕೃಷ್ಣ-ರಾಧೆಯರ, ನಿಷ್ಕಲ್ಮಷ, ಪ್ರೇಮಕ್ಕೆ ಸಾಟಿಯಾಗಲಾರದು. ಅದು ಸಮಾಜ, ಸಂಸಾರವನ್ನು ದಿಕ್ಕರಿಸುವ ವಯಸ್ಸಿನ ಕಾಮ ಉನ್ಮಾದವಲ್ಲ, ಪರಿಶುದ್ಧ ಪ್ರೀತಿ -ಪ್ರೇಮದ ಸಮೀಕರಣ. ವಯಸ್ಸಿನ ಆಕರ್ಷಣೆ, ಮನಸ್ಸನ್ನು, ಕಲುಷಿತಗೊಳಿಸದೇ ಪಾವಿತ್ರತೆ ಕಾಣಬೇಕು. ಅಸಹ್ಯ, ಅಸಭ್ಯತನಕ್ಕೆ ಅಂಕುಶವಿಡುವ ಕೃಷ್ಣ-ರಾಧೆಯರು ಎಂದೆಂದಿಗೂ ಬಿಡಿಸಲಾಗದ ರಾಧಾಕೃಷ್ಣ.

ಒಟ್ಟಿನಲ್ಲಿ, ಕೃಷ್ಣನ ಬಗ್ಗೆ ಪ್ರತಿಯೊಂದು ಬಾರಿ ಓದಿದಾಗ, ಬರೆಯುವಾಗ, ನನ್ನ ಕಿವಿ ನಿಮಿರುವುದು ಹಾಗೂ ತುಟಿ ಕೃಷ್ಣ- ಕೃಷ್ಣ ಎಂದು ಅದರುವುದು. ಕಾರಣ ಇಂದು ಅಗತ್ಯ ಇರುವ ಪೀತಾಂಬರದಾರಿ ಕೃಷ್ಣನ ಗುಣಧರ್ಮ, ಓದಿ, ವಿಮರ್ಶಿಸಿದಷ್ಟು, ಅಗೆದಷ್ಟು ಆತನಿಂದ ಸಿಗುವ ವಜ್ರಖಚಿತ ಹೊಳೆಯುವ ಸಂದೇಶ ಸರ್ವರಿಗೂ ಅತ್ಯಂತ ಆದರ್ಶಪ್ರಾಯ. ಜೀವನದ ಪ್ರತೀ ಮಗ್ಗುಲಲ್ಲೂ ಕೃಷ್ಣ-ನದೇ ನಾದ ಹಾಗೂ ಆತನ ಗೀತೋಪದೇಶದ ದಶವತಾರದ ವಿರಾಟ ರೂಪ . ಆ ಕಾರಣದಿಂದಲೇ ನನಗೆ ಮತ್ತೆ ಮತ್ತೆ ಅನಿಸುತದೆ, ಕೃಷ್ಣ, ಕೇವಲ ದೈವಿ ಸ್ವರೂಪನಲ್ಲ- ದೈನಿಕ ಸ್ವರೂಪ

ಪ್ರಕಾಶ್ ಜೋಗಿ,                                                                                                                    ಪ್ರಾಂಶುಪಾಲರು, ಅಮೃತ ಭಾರತಿ ಪದವಿಪೂರ್ವ ಕಾಲೇಜು, ಹೆಬ್ರಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!