ಹೆಬ್ರಿಯಲ್ಲಿ ಭರದ ಸಿದ್ಧತೆ : ಡಿಸಿ ಎಸ್ ಪಿ ಸೇರಿದಂತೆ ಅಧಿಕಾರಿಗಳ ಭೇಟಿ : ಪರಿಶೀಲನೆ.
ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮುದ್ರಾಡಿ ಮಂಜುನಾಥ ಪೂಜಾರಿ ಉಪಸ್ಥಿತಿ.
ಉಡುಪಿ : ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ವ್ಯಕ್ತವಾಗಿರುವ ಆತಂಕ ಹಾಗೂ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೆ.18ರಂದು ಹೆಬ್ರಿಗೆ ಭೇಟಿ ನೀಡಲಿದ್ದಾರೆ.
ಮಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ 3 ಗಂಟೆಗೆ ಹೆಬ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಿರ್ಮಿಸಲಾಗುವ ಹೆಲಿಪ್ಯಾಡ್‌ಗೆ ಆಗಮಿಸಲಿರುವ ಅವರು, ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ಹೆಬ್ರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕಸ್ತೂರಿರಂಗನ್ ವರದಿಯ 7ನೇ ಕರಡು ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ವರದಿ ಕುರಿತು ಸಾರ್ವಜನಿಕ ಆಕ್ಷೇಪಣೆ ಹಾಗೂ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ ನಡೆಯುತ್ತಿದ್ದು, ಜನವಸತಿ ಪ್ರದೇಶಗಳನ್ನು ವರದಿ ವ್ಯಾಪ್ತಿಯಿಂದ ಕೈಬಿಡಬೇಕು ಎಂಬ ಒತ್ತಾಯ ವಿವಿಧೆಡೆಗಳಿಂದ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಹೆಬ್ರಿ ಭಾಗದಲ್ಲಿ ರೈತರು ಹಾಗೂ ಸ್ಥಳೀಯರೊಂದಿಗೆ ಮುಖ್ಯಮಂತ್ರಿಗಳು ಚರ್ಚೆ ನಡೆಸುವ ಸಾಧ್ಯತೆ ಇದೆ. ಕಸ್ತೂರಿರಂಗನ್ ವರದಿ ಕುರಿತು ಕಾರ್ಕಳ, ಹೆಬ್ರಿ, ಕುಂದಾಪುರ, ಬೈಂದೂರು, ಬೆಳ್ತಂಗಡಿ, ಸುಳ್ಯ, ಪುತ್ತೂರು ಸೇರಿದಂತೆ ಪಶ್ಚಿಮಘಟ್ಟದ ಹಲವು ಗ್ರಾಮಗಳ ಜನರು ಆತಂಕಕ್ಕೆ ಒಳಗಾಗಿದ್ದಾರೆ. 7ನೇ ಕರಡು ಹಿನ್ನೆಲೆಯಲ್ಲಿ ಮುಂದಿನ ಕ್ರಮಗಳ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರ ಹೆಬ್ರಿ ಭೇಟಿ ಮಹತ್ವ ಪಡೆದುಕೊಂಡಿದೆ. ಸಭೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ರೈತರು ಹಾಗೂ ಸಾರ್ವಜನಿಕರಿಂದ ವರದಿಗೆ ಸಂಬಂಧಿಸಿದ ಅಭಿಪ್ರಾಯ ಮತ್ತು ಆಕ್ಷೇಪಣೆಗಳನ್ನು ಆಲಿಸುವ ಸಾಧ್ಯತೆ ಇದೆ.
ಸೆ.18ರಂದು ಬೆಳಗ್ಗೆ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲಿರುವ ಸಿಎಂ ಡಿ.ಕೆ. ಶಿವಕುಮಾರ್, ಮಧ್ಯಾಹ್ನ 2.30ಕ್ಕೆ ಮೇರಿಹಿಲ್ಸ್ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಮೂಲಕ ಹೆಬ್ರಿಗೆ ಪ್ರಯಾಣಿಸಲಿದ್ದು, 3 ಗಂಟೆಗೆ ಹೆಬ್ರಿ ಹೆಲಿಪ್ಯಾಡ್ ತಲುಪಲಿದ್ದಾರೆ. ಸಭೆ ಬಳಿಕ ಸಂಜೆ 5 ಗಂಟೆಗೆ ಹೆಬ್ರಿಯಿಂದ ಮಂಗಳೂರಿಗೆ ತೆರಳಲಿದ್ದಾರೆ.
ಪರಿಶೀಲನೆ ವೇಳೆ ಕಾರ್ಕಳ ಕಾಂಗ್ರೆಸ್ ನಾಯಕರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ರಾಜ್ಯದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಮುಖಂಡರಾದ ಹೆಬ್ರಿ ಪ್ರವೀಣ್ ಬಲ್ಲಾಳ್, ನವೀನ್ ಕೆ ಅಡ್ಯಂತಾಯ, ಎಚ್.ಜನಾರ್ದನ್, ಸೇರಿದಂತೆ ಪ್ರಮುಖರು ಹಾಜರಿದ್ದರು.



