ಹೆಬ್ರಿ : ಅಂದು ಹೆಬ್ರಿ ಗ್ರಾಮದಲ್ಲಿ ಸಣ್ಣ ವ್ಯವಸ್ಥೆಯಲ್ಲಿ ಸಮಾನಮನಸ್ಕರ ತಂಡದಲ್ಲಿ ಅಮರನಾಥ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಸಮಾಜ ಮಂದಿರದಲ್ಲಿ ಶುಭಾರಂಭಗೊಂಡ ಹೆಬ್ರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಆರಂಭಗೊಂಡ ಹೆಬ್ರಿ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಈಗ 51ರ ಸಂಭ್ರಮ. 2025ರಲ್ಲಿ ಹೆಬ್ರಿ ಗಣೇಶೋತ್ಸವದ ಸುವರ್ಣ ಸಂಭ್ರಮವನ್ನು 5 ದಿನಗಳ ಕಾಲ ಹೆಬ್ರಿ ಶ್ರೀರಾಮ ಮಂಟಪದಲ್ಲಿ ಸರ್ವರ ಸಹಕಾರದಲ್ಲಿ ಸಂಭ್ರಮದಿಂದ ನೆರವೇರಿಸಲಾಗಿದೆ. ಶ್ರೀ ಗಣಪತಿ ದೇವರಿಗೆ ಸುವರ್ಣ ಸಂಭ್ರಮದ ನೆನಪಿಗಾಗಿ ಸ್ವರ್ಣಲೇಪಿತ ಕಿರೀಟವನ್ನು ಕಳೆದ ವರ್ಷದಲ್ಲಿ ಸಮರ್ಪಿಸಲಾಗಿದೆ.
ಹಂತಹಂತವಾಗಿ ಬೆಳೆದು ಅತ್ಯಂತ ಯಶಸ್ವಿಯಾಗಿ ನಾಡ ಹಬ್ಬದಂತೆ ಹೆಬ್ರಿಯ ಶ್ರೀ ಗಣೇಶೋತ್ಸವ ಸಂಭ್ರಮ ನಡೆಯುತ್ತದೆ. ಸಾವಿರಾರು ಮಂದಿ ಭಕ್ತಸಮೂಹ ಸಾಕ್ಷಿಯಾಗುತ್ತಾರೆ. 1500 ಕ್ಕೂ ಹೆಚ್ಚು ಮಂದಿ ಪೂಜೆಯನ್ನು ಸಮರ್ಪಿಸುತ್ತಾರೆ. ರಂಗಪೂಜೆ, ಮಹಾಅನ್ನದಾನ, ಕ್ರೀಡೋತ್ಸವ, ಸಾಂಸ್ಕೃತಿಕ ವೈಭವ ನಡೆಯುತ್ತದೆ. ಹೆಬ್ರಿ ಪಟ್ಟಣದಲ್ಲಿ ಅತ್ಯಂತ ವೈಭವದ ಶೋಭಾಯಾತ್ರೆ ನಡೆಯುತ್ತದೆ. ಪ್ರಸ್ತುತ ಎಚ್. ಜನಾರ್ಧನ್ ಅಧ್ಯಕ್ಷತೆಯಲ್ಲಿ ಹೆಬ್ರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯು ಒಂದು ತಂಡವಾಗಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸಂಭ್ರಮದ ಯಶಸ್ಸಿಗೆ ವಿವಿಧ ಉಪ ಸಮಿತಿಗಳು, ಸ್ವಯಂಸೇವಕರು, ಪ್ರಮುಖರು, ಸದಸ್ಯರು ಸಮರ್ಪಣಾ ಭಾವದಿಂದ ಶ್ರಮಿಸುತ್ತಾರೆ.
ಈ ವರ್ಷ 51 ನೇ ವರ್ಷದ ಶ್ರೀ ಗಣೇಶೋತ್ಸವ ವೈಭವದಲ್ಲಿ ಸೆಷ್ಟಂಬರ್ 14ರಿಂದ 17 ರ ತನಕ 4 ದಿನ ಗಳ ಕಾಲ ಹೆಬ್ರಿ ರಾಮ ಮಂಟಪದಲ್ಲಿ ನಡೆಯಲಿದೆ. ೪ ದಿನಗಳು ವಿವಿಧ ಕಾರ್ಯಕ್ರಮಗಳು ನಡೆಯಲಿದೆ. 17 ರಂದು ಸಮಾರೋಪ ಸಂಭ್ರಮ ನಡೆಯಲಿದೆ.
ವಿವಿಧ ಗಣ್ಯರು ಭಾಗವಹಿಸಲಿದ್ದು ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಅಭಿನಂನೆ ನಡೆಯಲಿದೆ. ಮಧ್ಯಾಹ್ನ ಸಾರ್ವಜನಿಕ ಮಹಾಅನ್ನ ಸಂತರ್ಪಣೆ ನಡೆಯಲಿದೆ. ಸಂಜೆಯ ಮಹಾಪೂಜೆಯ ಬಳಿಕ ಬೆಳ್ಳಿಯ ಪ್ರಭಾವಳಿ, ಸ್ವರ್ಣಲೇಪಿತ ಕಿರೀಟದೊಂದಿಗೆ ಶ್ರೀ ಗಣಪತಿ ದೇವರ ಭವ್ಯ ಪುರಮೆರವಣಿಗೆ, ವೈಭವದ ಶೋಭಾಯಾತ್ರೆ, ವಿವಿಧ ಕಲಾ ಪ್ರಕಾರಗಳ ಆಕರ್ಷಕ ಟ್ಯಾಬ್ಲೋ, ನೃತ್ಯದೊಂದಿಗೆ ನಡೆಯಲಿದೆ.



